ನ್ಯೂಸ್

ನಿಂತಿದ್ದ ಬಸ್​ಗೆ TT ಡಿಕ್ಕಿ; ನಾಲ್ವರು ಸಾವು, ಹಲವರಿಗೆ ಗಂಭೀರ ಗಾಯ

ಲಖನೌ: ನಿಂತಿದ್ದ ಬಸ್​ಗೆ ಟೆಂಪೋ ಟ್ರಾವೆಲರ್ (TT) ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಪೂರ್ವಾಂಚಲ್ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ.

ರಸ್ತೆಬದಿ ಕೆಟ್ಟು ನಿಂತಿದ್ದ ಬಸ್​ಗೆ ಟೆಂಪೋ ಟ್ರಾವೆಲರ್​ (TT) ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಗಾಯಾಳು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದು, ಪೊಲೀಸು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿಲೀಪ್​ ಕುಮಾರ್ ಸಿಂಗ್​, ಛತ್ತೀಸ್​ಗಢದಿಂದ ಅಯೋಧ್ಯೆಗೆ ತೆರಳುತ್ತಿದ್ದ ಬಸ್ಸೊಂದು ಕೆಟ್ಟಿ ರಸ್ತೆಬದಿ ನಿಂತಿತ್ತು. ವೇಗವಾಗಿ ಬಂದ ಟೆಂಪೋ ಟ್ರಾವೆಲರ್ (TT) ನಿಂತಿದ್ದ ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿಲೀಪ್​ ಕುಮಾರ್ ಸಿಂಗ್ ತಿಳಿಸಿದ್ದಾರೆ.