ಅಮರಾವತಿ: ಒಂದೇ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಈ ಆತ್ಮಹತ್ಯೆಗೆ ಕಾರಣ ಡೆತ್ನೋಟ್ನಿಂದ ಬಯಲಾಗಿದೆ.
ಪ್ರತಾಪ್(42) ಆತನ ಹೆಂಡತಿ ಹೇಮಲತಾ(36), ಮಗ ಜಯಂತ್(17) ಮತ್ತು ಮಗಳು ರಿಶಿತಾ(14) ಆತ್ಮಹತ್ಯೆಗೆ ಶರಣಾದವರು. ಇವರೆಲ್ಲರೂ ವಿಷ ಕುಡಿದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಇತ್ತೀಚೆಗೆ ಕರೊನಾದಿಂದಾಗಿ ಅವರ ಸಂಬಂಧಿಗಳು ಹಾಗೂ ಸ್ನೇಹಿತರು ಸತ್ತಿದ್ದನ್ನು ನೋಡಿ ಬೇಸತ್ತಿದ್ದ ಕುಟುಂಬ ಅದೇ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ನಲ್ಲಿ ಬರೆದಿದ್ದಾಗಿ ಹೇಳಲಾಗಿದೆ.
ಪ್ರತಾಪ್ ಟಿವಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮೃತರು ಮನೆಯೊಳಗೇ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳೀಯರ ಮಾಹಿತ ಆಧಾರದ ಮೇಲೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)