ನ್ಯೂಸ್

ವಕ್ಫ್ ಬೋರ್ಡ್‌ನಲ್ಲಿ 4 ಕೋಟಿ ರೂ. ಅವ್ಯವಹಾರ

ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರದ ಆರೋಪ ಕೇಳಿಬಂದಿದೆ. ನಾಲ್ಕು ಕೋಟಿ ಮೊತ್ತವನ್ನು

ಅನ್ಯಖಾತೆಯಲ್ಲಿ ಠೇವಣಿ ಇರಿಸಿದ್ದು, 8 ಕೋಟಿ ರೂ. ನಷ್ಟವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಮಂಡಳಿ ಮಾಜಿ ಸಿಇಒ ವಿರುದ್ಧ ಪ್ರಕರಣ ದಾಖಲಾಗಿದೆ. ವಕ್ಫ್ ಮಂಡಳಿ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮ್ಮದ್ ಅಬ್ಬಾಸ್ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಮಾಜಿ ಸಿಇಒ ಝಲ್ಫಿಕಾರುಲ್ಲಾ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲುಬುರಗಿ ದರ್ಗಾ ಆಸ್ತಿಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆದು ಮಂಡಳಿಗೆ 2.29 ಕೋಟಿ ರೂ. ಮತ್ತು ಮುಜರಾಯಿ ಕಡೆಯಿಂದ 1.79 ಕೋಟಿ ರೂ. ನೀಡಲಾಗಿತ್ತು. ಬೆಂಗಳೂರಿನ ಬೆನ್ಸೆನ್ ಟೌನ್‌ನಲ್ಲಿರುವ ಇಂಡಿಯನ್ ಬ್ಯಾಂಕ್ ಖಾತೆಯಲ್ಲಿ 4 ಕೋಟಿ ರೂ. ಜಮೆ ಮಾಡಲಾಗಿತ್ತು. 2016ರ ನವೆಂಬರ್‌ನಲ್ಲಿ ಸಿಇಒ ಆಗಿದ್ದ ಝಲ್ಫಿಕಾರುಲ್ಲಾ, ಚಿಂತಾಮಣಿಯಲ್ಲಿರುವ ಬೋರ್ಡ್‌ನ ವಿಜಯ ಬ್ಯಾಂಕ್ ಖಾತೆಗೆ 4 ಕೋಟಿ ರೂ. ವರ್ಗಾವಣೆ ಮಾಡಿ ಠೇವಣಿ ಇರಿಸಿದ್ದರು.

ಇದು ಆಗ ಮಂಡಳಿ ಗಮನಕ್ಕೆ ಬಂದಿರಲಿಲ್ಲ. ಸಂಸ್ಥೆಗೆ ನಂಬಿಕೆ ದ್ರೋಹ ಮಾಡಿರುವ ಝಲ್ಫಿಕಾರುಲ್ಲಾಗೆ ನೋಟಿಸ್ ಜಾರಿ ಮಾಡಲಾಗಿತ್ತಾದರೂ ಉತ್ತರ ಬರಲಿಲ್ಲ. ಅದಕ್ಕಾಗಿ ಮಂಡಳಿ ಸಭೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಮೇರೆಗೆ ಮುಖ್ಯ ಲೆಕ್ಕಾಧಿಕಾರಿಗಳು ಕ್ರಮಕ್ಕೆ ಮನವಿ ಮಾಡಿದ್ದಾರೆ.