ನ್ಯೂಸ್

ಟ್ರೇಡಿಂಗ್ ನೆಪ, ಅಕೌಂಟೆಂಟ್‌ಗೆ 4.43 ಕೋಟಿ ಧೋಖಾ

ಬೆಂಗಳೂರು: ಸ್ಟಾಕ್ ಮಾರ್ಕೆಟಿಂಗ್ ಕುರಿತು ತರಬೇತಿ ನೀಡುವ ನೆಪದಲ್ಲಿ ಗಾಳ ಬೀಸಿ ಅಕೌಂಟೆಂಟ್‌ನಿಂದ 4.43 ಕೋಟಿ ಹೂಡಿಕೆ ಮಾಡಿಸಿಕೊಂಡು ಸೈಬರ್ ವಂಚಕರು ಮೋಸ ಮಾಡಿದ್ದಾರೆ.

ಉತ್ತರಹಳ್ಳಿಯ ಕೆ.ಎಂ. ಮಧುಕುಮಾರ್ ಮೋಸಕ್ಕೆ ಒಳಗಾದವರು. ಜಪಾನ್ ಮೂಲದ ಸ್‌ಟಾವೇರ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ದಕ್ಷಿಣ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ ಅಪರಿಚಿತ ವ್ಯಕ್ತಿ, ಸ್ಟಾಕ್ ಮಾರ್ಕೆಟಿಂಗ್ ಕುರಿತು ತರಬೇತಿ ನೀಡುವುದಾಗಿ ಹೇಳಿದ್ದ. ಅದರಂತೆ ಇಡೀ ತಿಂಗಳು ಟ್ರೇಟಿಂಗ್ ಕುರಿತು ಶಿಕ್ಷಣ ನೀಡಿದ್ದು, ಈ ಗ್ರೂಪ್‌ನಲ್ಲಿ 129 ಜನರಿದ್ದರು. ಸೆ. 30ಕ್ಕೆ ಸಂಜೀವ್ ಸಿಂಗ್ ಎಂಬಾತ ಟ್ರೇಡಿಂಗ್ ಖಾತೆ ತೆರೆಯುವುದು ಮತ್ತು ಹೂಡಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ. ಇದಾದ ಮೇಲೆ ಎಲ್ಲರಿಗೂ ಖಾತೆ ತೆರೆಯುವಂತೆ ಸೂಚಿಸಿದ್ದು, ಪ್ರತಿಯೊಬ್ಬರೂ ಅದನ್ನು ಪಾಲಿಸಿದ್ದರು. ಪೋಲೆನ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ ಎಂಬ ಕಂಪನಿ ಸೆಬಿಯಲ್ಲಿ ನೋಂದಣಿ ಆಗಿರುವುದಾಗಿ ಸರ್ಟಿಫಿಕೇಟ್ ಸಹ ಗ್ರೂಪ್‌ನಲ್ಲಿ ಅಪ್‌ಡೇಟ್ ಮಾಡಿ ಭಾರತ ಮತ್ತು ಅಮೆರಿಕದಲ್ಲಿ ಷೇರುಗಳ ವಹಿವಾಟು ಇರುವುದಾಗಿ ನಂಬಿಸಿದ್ದರು. ಇದೇ ವೇಳೆ ಮಧುಕುಮಾರ್ ಮೊಬೈಲ್‌ಗೆ ಅವಿನಾಶ್ ಕುಮಾರ್ ಎಂಬಾತ ಕರೆ ಮಾಡಿ, ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಪೋಲೆನ್ ಷೇರುಗಳ ಅಸಲಿ ಎಂದು ನಂಬಿಸಿ ಪೊಲೀಸ್ ವಿಜಿಲೆನ್ಸ್‌ನಿಂದ ಲಿಂಕ್ ಕಳುಹಿಸುವುದಾಗಿ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದ.

ಇಷ್ಟೆಲ್ಲ ಆದ ಮೇಲೆ ಮಧುಕುಮಾರ್, ಅಸಲಿ ಕಂಪನಿ ಇರಬೇಕೆಂದು ಲಿಂಕ್ ಬಳಸಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿ ಕೆವೈಸಿ ಮತ್ತು ಲಾಗಿನ್ ಕೋಡ್ ಪಡೆದಿದ್ದರು. ಇದಾದ ಮೇಲೆ ಹಣ ಹೂಡಿಕೆ ಮಾಡಿದಾಗ ಅದರಲ್ಲಿ ₹10 ಸಾವಿರ ಲಾಭಾಂಶ ತೋರಿಸಿತ್ತು. ಅದನ್ನು ಮಧುಕುಮಾರ್, ವಿತ್ ಡ್ರಾ ಮಾಡಿದಾಗ ಅವರ ಖಾತೆಗೆ ಜಮೆ ಆಗಿತ್ತು. ಈ ಎಲ್ಲ ವ್ಯವಹಾರ ಅಸಲಿ ಇರಬೇಕೆಂದು ₹1.54 ಕೋಟಿ ಹೂಡಿಕೆ ಮಾಡಿದ್ದರು. ಇದಾದ ಮೇಲೆ ₹70 ಲಕ್ಷ ಮತ್ತು ₹40 ಲಕ್ಷ ಹೀಗೇ ಒಟ್ಟಾರೆ ₹4.43 ಕೋಟಿ ಹೂಡಿಕೆ ಮಾಡಿದ್ದರು. ಶೇ.300 ಲಾಭಾಂಶ ತೋರಿಸುತ್ತಿದ್ದ ಕಾರಣಕ್ಕೆ ವಿತ್ ಡ್ರಾ ಮಾಡಲು ಮಧುಕುಮಾರ್ ಪ್ರಯತ್ನಿಸಿದ್ದರು. ಆಗ ಅಪರಿಚಿತ ವ್ಯಕ್ತಿ ಕರೆ ಮಾಡಿ ನೀವು ಕೇಂದ್ರ ಸರ್ಕಾರದ ನಿಮಯಗಳನ್ನು ಉಲ್ಲಂಘನೆ ಮಾಡಿದ್ದೀರಿ. ನಿಮ್ಮ ಹೂಡಿಕೆ ಮತ್ತು ಲಾಭಾಂಶ ವಿತ್‌ಡ್ರಾ ಮಾಡಲು 1.18 ಕೋಟಿ ರೂ. ಶುಲ್ಕ ಪಾವತಿ ಮಾಡಬೇಕೆಂದು ಸೂಚಿಸಿದ್ದರು.

ಏನೇ ಪ್ರಯತ್ನ ಮಾಡಿದಾಗ ಹಣ ಹಿಂಪಡೆಯಲು ಸಾಧ್ಯವಾಗಿರಲಿಲ್ಲ. ಕೊನೆಗೆ ಇದೊಂದು ಸೈಬರ್ ವಂಚನೆ ಎಂಬುದು ಗೊತ್ತಾಗಿ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.