ನ್ಯೂಸ್

ದೇಶಾದ್ಯಂತ 4.39 ಕೋಟಿ ನಕಲಿ ಪಡಿತರ ಚೀಟಿಗಳು ರದ್ದು

ನವದೆಹಲಿ: ಪಡಿತರ ಚೀಟಿ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಸರಿಪಡಿಸಲು ಮುಂದಾಗಿರುವ ಸರ್ಕಾರ ದೊಡ್ಡ ಪ್ರಮಾಣದಲ್ಲೇ ಇದ್ದ ಅನರ್ಹ ಹಾಗೂ ನಕಲಿ ಪಡಿತರ ಚೀಟಿಗಳನ್ನು ರದ್ದು ಪಡಿಸಿದೆ. ಅಂದರೆ 2013ರಿಂದ 2020ರ ವರೆಗೆ ಒಟ್ಟು 4.39 ಕೋಟಿ ಪಡಿತರ ಚೀಟಿಗಳನ್ನು ಅದು ರದ್ದುಪಡಿಸಿದೆ.

ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಗಳ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆಹಾರ, ನಾಗರಿಕ ಸೇವಾ ಮತ್ತು ಸರಬರಾಜು ಸಚಿವಾಲಯ ಮಾಹಿತಿ ನೀಡಿದೆ. ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸರಬರಾಜು ವ್ಯವಸ್ಥೆಯ ಸುಧಾರಣೆ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪಡಿತರ ಚೀಟಿಗಳು ಮತ್ತು ಫಲಾನುಭವಿಗಳ ದತ್ತಾಂಶಗಳ ಡಿಜಿಟಲೀಕರಣ, ಆಧಾರ್​ ಸೀಡಿಂಗ್​, ಅನರ್ಹ ಹಾಗೂ ನಕಲಿ ಪಡಿತರ ಚೀಟಿಗಳ ಪತ್ತೆ, ದತ್ತಾಂಶಗಳ ನಕಲು ಪತ್ತೆ, ವಲಸೆ ಹಾಗೂ ಮೃತ ಫಲಾನುಭವಿಗಳ ಮಾಹಿತಿ ಅಪ್​ಡೇಟ್​ ಮಾಡುವ ಮೂಲಕ ಇದು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. (ಏಜೆನ್ಸೀಸ್​)