ನ್ಯೂಸ್

ಪಾಕಿಸ್ತಾನದಲ್ಲಿ ಗುಂಡಿನ ದಾಳಿಗೆ 38 ಜನರು ಬಲಿ.. 10 ಮಂದಿ ಗಂಭೀರ ಸ್ಥಿತಿ!| Attack In Pakistan

ಪಾಕಿಸ್ತಾನ: ಶಿಯಾ ಮುಸ್ಲಿಂ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಬಂದೂಕುಧಾರಿಗಳು(Attack In Pakistan) ಏಕಾಏಕಿ ಗುಂಡು ಹಾರಿಸಿ ಆರು ಮಹಿಳೆಯರು ಸೇರಿದಂತೆ ಅಂದಾಜು 38 ಜನರನ್ನು ಕೊಂದಿರುವ ಘಟನೆ ಪಾಕಿಸ್ತಾನದಲ್ಲಿ ಗುರುವಾರ (ನ.21) ನಡೆದಿದೆ ಎಂದು ವರದಿಯಾಗಿದೆ.

ಇಲ್ಲಿನ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಾಮ್ ಎಂಬ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ಈ ಪ್ರಾಂತ್ಯದಲ್ಲಿ ಬಹುಸಂಖ್ಯಾತ ಸುನ್ನಿ ಮುಸ್ಲಿಮರು ಮತ್ತು ಅಲ್ಪಸಂಖ್ಯಾತ ಶಿಯಾಗಳ ನಡುವಿನ ಪಂಥೀಯ ಘರ್ಷಣೆಗಳು ನಡೆಯುತ್ತಲೇ ಇವೆ. ಇನ್ನು, ದಾಳಿಯನ್ನು ಯಾವ ಭಯೋತ್ಪಾಕ ಸಂಘಟನೆಗಳು ಜವಬ್ದಾರಿ ವಹಿಸಿಕೊಂಡಿಲ್ಲ.

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಲವಾರು ವಾಹನಗಳು ಪರಾಚಿನಾರ್ ನಗರದಿಂದ ರಾಜಧಾನಿ ಪೇಶಾವರಕ್ಕೆ ತೆರಳುವ ವೇಳೆ ಮಧ್ಯದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಕನಿಷ್ಠ 10 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಇಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿ ಅಜ್ಮತ್ ಅಲಿ ತಿಳಿಸಿದ್ದಾರೆ.

ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ, (ಏಜೆನ್ಸೀಸ್​).