ನ್ಯೂಸ್

ದಕ್ಷಿಣ ಭಾರತ ಉತ್ಸವ: ರಾಜ್ಯಕ್ಕೆ ಹರಿದು ಬಂತು 3,750 ಕೋಟಿ ರೂ. ಬಂಡವಾಳ: ಸಚಿವ ಎಚ್.ಕೆ.ಪಾಟೀಲ್ ಮಾಹಿತಿ

ಬೆಂಗಳೂರು: ದಕ್ಷಿಣ ಭಾರತ ಉತ್ಸವದ ಸಂದರ್ಭದಲ್ಲಿ ಕರ್ನಾಟಕ್ಕೆ 3,750 ಕೋಟಿ ರೂ. ಬಂಡವಾಳ ಹರಿದು ಬಂದಿದೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಾಹಾಸಂಸ್ಥೆ (ಎಫ್​ಕೆಸಿಸಿಐ) ಮತ್ತು ಪ್ರವಾಸೋದ್ಯಮ ಇಲಾಖೆ ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ 'ದಕ್ಷಿಣ ಭಾರತ ಉತ್ಸವ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕದ 320 ಕಿಲೋಮೀಟರ್ ಉದ್ದದ ಕರಾವಳಿ ಕಡಲ ತೀರದಲ್ಲಿರುವ 40 ತಾಣಗಳನ್ನು ಗುರುತಿಸಲಾಗಿದೆ. ಈ ತಾಣಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕ ಪುರಾತತ್ವ ಕ್ಷೇತ್ರದಲ್ಲಿ ವಿಶೇಷ ಸ್ಥಾನದಲ್ಲಿದೆ. 25,000ಕ್ಕೂ ಹೆಚ್ಚು ಮಹತ್ವದ ಸ್ಮಾರಕಗಳು ಕರ್ನಾಟಕದಲ್ಲಿವೆ. ಆದರೆ ಈ ಎಲ್ಲಾ ಸ್ಥಾನಗಳ ಪೈಕಿ ಕೇವಲ 500 ತಾಣಗಳನ್ನು ಮಾತ್ರ ನಾವು ಸಂರಕ್ಷಿಸುತ್ತಿದ್ದೇವೆ. ಉಳಿದ ತಾಣಗಳ ಸಂರಕ್ಷಣೆಗೆ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ದತ್ತು ಸ್ಮಾರಕ ಯೋಜನೆಯಂತಹ ವಿಶೇಷ ಕಾರ್ಯಕ್ರಮಗಳಿಗೆ ದಾನಿಗಳು ಸಹಕರಿಸಬೇಕೆಂದು ಕೋರಿದರು.

ಕರ್ನಾಟಕ ಹಲವಾರು ಶ್ರದ್ಧಾ ಕೇಂದ್ರಗಳನ್ನು ಹೊಂದಿ ಅತೀ ಪವಿತ್ರವಾದ ರಾಜ್ಯಗಳಲ್ಲಿ ಕರ್ನಾಟಕ ಹಿರಿಯ ಸ್ಥಾನದಲ್ಲಿದೆ. ಮಂಗಳೂರು ಉಡುಪಿ ಕಾರವಾರದಿಂದ ಹಿಡಿದು ಸವದತ್ತಿ ರೇಣುಕಾ ಯಲ್ಲಮ್ಮ, ಚಾಮುಂಡೇಶ್ವರಿ ಹುಲಿಗೆಮ್ಮ ಹೊಳಲಮ್ಮ ಬಾದಾಮಿ ಬನಶಂಕರಿ ಗಾಣಗಾಪುರ ದತ್ತಮಂದಿರ ಬೀದರ್ ಬಸವನಾಡು, ಕೂಡಲಸಂಗಮ ಸೇರಿದಂತೆ ಇಂತಹ ಪವಿತ್ರ ಸ್ಥಳಗಳಲ್ಲಿ ಕರ್ನಾಟಕ ಮೂಲಭೂತ ಸೌಲಭ್ಯ ಸೃಷ್ಟಿಸುವ ಪಿಪಿಪಿ ಮಾಡೆಲ್​ನಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಣಯಿಸಿದೆ.

ಹಂಪಿ ಪಟ್ಟದಕಲ್ಲು ಬೇಲೂರು ಹಳೇಬೀಡು ಸೋಮನಾಥಪುರ ಪಶ್ಚಿಮ ಘಟ್ಟಗಳ ನೈಸರ್ಗಿಕ ತಾಣಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳೆಂದು ಯುನೆಸ್ಕೊದಿಂದ ಮಾನ್ಯತೆ ಪಡೆದಿವೆ. ಬೀದರನ ಕರೇಜ್ ಲಕ್ಕುಂಡಿ ಡೆಕ್ಕನ್ ಸಲ್ತನೇತಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲು ಸೂಕ್ತ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ.

ಅರಣ್ಯ ಗುಡ್ಡಗಾಡು ಹೊಳ್ಳಕೊಳ್ಳ ನೈಸರ್ಗಿಕ ಸಂಪತ್ತಿಗೆ ಹೆಸರಾದದ್ದು ಕರ್ನಾಟಕ ವನ್ಯಜೀವಿಗಳು ನೈಸರ್ಗಿಕ ರಮಣೀಯ ಸ್ಥಳಗಳ ಪ್ರದರ್ಶನ ವಿಶೇಷ ರೀತಿಯಲ್ಲಿ ಆಗಬೇಕಾಗಿದೆ ಅದಕ್ಕಾಗಿ ವಿಶೇಷ ಪ್ರಯತ್ನ ಮಾಡಲು ಸರ್ಕಾರ ನಿರ್ಧರಿಸಿದೆ. ಸಾಹಸಿ ಪ್ರವಾಸೋದ್ಯಮ, ಶೈಕ್ಷಣಿಕ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ದಿನ, ಸಂತೋಷದಿಂದ ಬೇಸರ ಕಳೆಯುವ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಪಾರಂಪರಿಕ ತಾಣಗಳ ಅಧ್ಯಯನ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.