ಬೆಂಗಳೂರು: ಹಳೆಯ ಬಟ್ಟೆಯನ್ನು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದ ವಿದ್ಯಾರ್ಥಿನಿಗೆ ಗ್ರಾಹಕನ ನೆಪದಲ್ಲಿ ಕರೆ ಮಾಡಿದ ಸೈಬರ್ ಕಳ್ಳರು, ಆಕೆಯ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾರೆ.
ಅಶ್ವತ್ಥನಗರದ 20 ವರ್ಷದ ವಿದ್ಯಾರ್ಥಿನಿ ವಂಚನೆಗೆ ಒಳಗಾದವಳು. ಈಕೆ ಕೊಟ್ಟ ದೂರಿನ ಮೇರೆಗೆ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಳೇ ಬಟ್ಟೆಗಳನ್ನು ಒಎಲ್‌ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿ 1,850 ರೂ.ಗೆ ಮಾರಾಟಕ್ಕೆ ಇಟ್ಟಿದ್ದಳು. ಈ ಪೋಸ್ಟ್ ನೋಡಿ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಬಟ್ಟೆಗಳನ್ನು ಖರೀದಿ ಮಾಡುವುದಾಗಿ ಹೇಳಿದ್ದ. ನಂತರ ‘ವಾಟ್ಸ್‌ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿ. ಇದನ್ನು ಸ್ಕಾೃನ್ ಮಾಡಿದರೆ ನಿಮಗೆ ಹಣ ಬರಲಿದೆ’ ಎಂದು ನಂಬಿಸಿದ್ದ.
ಇದನ್ನು ನಂಬಿದ ಯುವತಿ, ಕ್ಯೂಆರ್ ಕೋಡ್ ಸ್ಕಾೃನ್ ಮಾಡಿದಾಗ ಹಣ ಬಂದಿರಲಿಲ್ಲ. ವಾಪಸ್ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ಸ್ಕಾೃನ್ ಮಾಡಿ 2 ರೂ. ಪಾವತಿ ಮಾಡಿ. ವಾಪಸ್ ನಿಮಗೆ ಹಣ ಕಳುಹಿಸುತ್ತೇನೆ ಎಂದಿದ್ದ. ಯುವತಿ 2 ರೂ. ಪಾವತಿ ಮಾಡುತ್ತಲೇ ಹಂತ ಹಂತವಾಗಿ ಆಕೆಯ ಬ್ಯಾಂಕ್ ಖಾತೆಯಿಂದ 36,950 ರೂ. ವಿದ್ಯಾರ್ಥಿನಿ ಬ್ಯಾಂಕ್ ಖಾತೆಯಿಂದ ಕಡಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.