ನ್ಯೂಸ್

ಕರೊನಾದಿಂದ ಒಂದೇ ದಿನ 36 ಸಾವು, 1,553 ಜನರಿಗೆ ಸೋಂಕು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್​-19 ಕಾಯಿಲೆಗೊಳಗಾದ 36 ಜನರು ಮೃತಪಟ್ಟಿದ್ದಾರೆ ಹಾಗೂ 1,553 ಜನರಿಗೆ ಸೋಂಕು ತಗುಲಿದೆ. ಈವರೆಗೆ ಮೃತಪಟ್ಟವರ ಪ್ರಮಾಣ 543ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಮಾಹಿತಿ ನೀಡಿದೆ.

ಪ್ರಸ್ತುತ ದೇಶದಲ್ಲಿ ಸೋಂಕಿತರ ಸಂಖ್ಯೆ 17,265ಕ್ಕೆ ತಲುಪಿದೆ. ಜಾಗತಿಕವಾಗಿ ಕರೊನಾ ಪೀಡಿತರ ಸಂಖ್ಯೆಯಲ್ಲೂ ಭಾರಿ ಹೆಚ್ಚಳವಾಗಿದೆ. ಜಗತ್ತಿನಲ್ಲಿ ಒಟ್ಟು ಈ ಪ್ರಮಾಣದಲ್ಲೂ ಹೆಚ್ಚಳವಾಗಿದೆ. 24 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ವ್ಯಾಪಿಸಿದ್ದು, ಮೃತರ ಸಂಖ್ಯೆ 1,65,243 ಆಗಿದೆ. ಅಮೆರಿಕವೊಂದರಲ್ಲಿಯೇ 7.60 ಲಕ್ಷ ಜನರಲ್ಲಿ ಕರೊನಾ ಕಾಣಿಸಿಕೊಂಡಿದ್ದು, 40,677 ಜನರು ಸಾವಿಗೀಡಾಗಿದ್ದಾರೆ.

ಲಾಕ್​ಡೌನ್​ವೊಂದೇ ಔಷಧ: ಕರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಲಾಕ್​ಡೌನ್​ವೊಂದೇ ಔಷಧವಾಗಿದೆ. ಹೀಗಾಗಿ ಮನೆಯಲ್ಲಿರುವುದಕ್ಕಿಂತ ಸುರಕ್ಷಿತ ಉಪಾಯ ಬೇರೊಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶೇ.80 ರೋಗಿಗಳಿಗೆ ಕಾಯಿಲೆ ಲಕ್ಷಣಗಳಿಲ್ಲ: ಈಗ ಪತ್ತೆಯಾಗಿರುವ ಶೇ.80ಕ್ಕೂ ಅಧಿಕ ಜನರಲ್ಲಿ ಕೋವಿಡ್​-19 ಕಾಯಿಲೆಯ ಲಕ್ಷಣಗಳೇ ಇಲ್ಲ. ಕೆಲವರಲ್ಲಿ ನಿಧಾನವಾಗಿ, ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ತಿಳಿಸಿದೆ.

ಕರ್ನಾಟಕದ ಕೊಡಗು, ಪುದುಚೇರಿಯ ಮಾಹೆ, ಉತ್ತರಾಖಂಡದ ಗೌರಿಪಡ್ವಾಲ್​ನಲ್ಲಿ ಕಳೆದ 28 ದಿನಗಳಿಂದ ಯಾವುದೇ ಕರೊನಾ ಪ್ರಕರಣಗಳು ವರದಿಯಾಗಿಲ್ಲ. ಕಳೆದ 14 ದಿನಗಳಿಂದ ಕರೊನಾ ಪತ್ತೆಯಾಗದ ಜಿಲ್ಲೆಗಳ ಸಂಖ್ಯೆ 59ಕ್ಕೆ ಏರಿದೆ. ಗೋವಾ ಕರೊನಾ ಮುಕ್ತವಾಗಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ 4203, ದೆಹಲಿಯಲ್ಲಿ 2003, ಗುಜರಾತ್​​ನಲ್ಲಿ 1743, ರಾಜಸ್ಥಾನ-1478, ತಮಿಳುನಾಡು-1477, ಮಧ್ಯಪ್ರದೇಶ 1407, ಉತ್ತರಪ್ರದೇಶದಲ್ಲಿ 1084 ಪ್ರಕರಣಗಳು ವರದಿಯಾಗಿವೆ.