Kayadu Lohar : ನಟಿ ಕಯಾದು ಲೋಹರ್ ಹೆಸರು ಇತ್ತೀಚಗೆ ಸಾಕಷ್ಟು ಸದ್ದು ಮಾಡುತ್ತಿದೆ. ಡ್ರ್ಯಾಗನ್ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕಯಾದು ಖ್ಯಾತಿ ಹೆಚ್ಚಿದೆ. ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಾಟ್ ಬ್ಯೂಟಿ 2021ರಲ್ಲಿ ತೆರೆಕಂಡ ಕನ್ನಡ ಸಿನಿಮಾ ಮುಗಿಲ್ಪೇಟೆ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರಗಳು ಗಮನ ಸೆಳೆಯದಿದ್ದರೂ, ನಟ ಪ್ರದೀಪ್ ರಂಗನಾಥನ್ ಜೊತೆಗೆ ನಟಿಸಿದ ಡ್ರ್ಯಾಗನ್, ಕಯಾದು ಲೋಹರ್ ಅವರ ಸಿನಿ ಜೀವನವನ್ನೇ ಬದಲಿಸಿದೆ. ಈ ನಟಿಯನ್ನು ಮುಂದಿನ ನ್ಯಾಷನಲ್ ಕ್ರಶ್ ಅಂತಾನೂ ಬಣ್ಣಿಸಲಾಗುತ್ತಿದೆ.
ತಾಜಾ ಸಂಗತಿ ಏನೆಂದರೆ, ತಮಿಳುನಾಡಿನ ರಾಜ್ಯ ನಿಯಂತ್ರಿತ ಮದ್ಯ ಕಂಪನಿಯಾದ TASMACಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಈ ತನಿಖೆಯಲ್ಲಿ ಕಯಾದು ಲೋಹರ್ ಹೆಸರೂ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಇಡಿ ಕಣ್ಗಾವಲಿನಲ್ಲಿದ್ದಾರೆ ಎಂದು ಮಿಡ್-ಡೇ ವರದಿ ಮಾಡಿದೆ.
ಈ ಭ್ರಷ್ಟಾಚಾರ ಪ್ರಕರಣದಲ್ಲಿ ಕಯಾದು ಲೋಹರ್ಗೆ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲಿ ಸದ್ಯ ತನಿಖೆ ನಡೆಸಲಾಗುತ್ತಿದೆ. TASMAC ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳು ನಟಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿ ಹೇಳಿದೆ. ಆರೋಪಿಗಳು ಆಯೋಜಿಸಿದ್ದ ರಾತ್ರಿ ಪಾರ್ಟಿಗೆ ಕಯಾದು 35 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಕಯಾದು ಮೇಲೆ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
ಅಂದಹಾಗೆ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಹಸ್ತಕ್ಷೇಪವು ಎಲ್ಲ ಮಿತಿಗಳನ್ನು ಮೀರಿದೆ ಮತ್ತು ಫೆಡರಲ್ ಆಡಳಿತದ ಪರಿಕಲ್ಪನೆಯನ್ನು ಉಲ್ಲಂಘಿಸಿದೆ ಎಂದು ಸುಪ್ರೀಂ ಕೋರ್ಟ್ ನಿನ್ನೆ (ಮೇ 22) ಹೇಳಿದ್ದು, TASMAC ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸುಪ್ರೀಂ ಕೋರ್ಟ್ ಸದ್ಯಕ್ಕೆ ತಡೆ ನೀಡಿದೆ. (ಏಜೆನ್ಸೀಸ್)