ತೆಹ್ರಾನ್: ಕಳೆದ ವಾರ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ಸೇನೆ ನಡೆಸಿದ್ದ ವಾಯುದಾಳಿಯಲ್ಲಿ ಮೃತಪಟ್ಟಿದ್ದ ಇರಾನ್ ಕ್ವಾಡ್ಸ್ ಫೋರ್ಸ್ ಕಮಾಂಡರ್ ಖಾಸಿಮ್ ಸೊಲೈಮಾನಿ ಅಂತ್ಯಕ್ರಿಯೆಗೂ ಮೊದಲು ನಡೆದ ಅಂತಿಮಯಾತ್ರೆ ಮೆರವಣಿಗೆ ವೇಳೆ ಉಂಟಾದ ಕಾಲ್ತುಳಿತಕ್ಕೆ ಸುಮಾರು 35 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಕ್ರಾಂತಿಕಾರಿ ಜನರಲ್ ಎಂದೇ ಹೆಸರು ಮಾಡಿದ್ದ ಸೊಲೈಮಾನಿ ಅವರ ಮನೆಯಿರುವ ಇರಾನ್ ಆಗ್ನೇಯ ಭಾಗದ ಕೆರ್ಮನ್ನಲ್ಲಿ ನಡೆದ ಅಂತಿಮ ಯಾತ್ರೆ ನಿನ್ನೆಯಿಂದಲೂ ನಡೆಯುತ್ತಿದ್ದು ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಅದೆಷ್ಟೋ ಜನರು ಅಳುತ್ತಿದ್ದರು. ಆಕ್ರೋಶದಿಂದ ಕೂಗಾಡುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕಾಲ್ತುಳಿತವುಂಟಾಗಿ ಈ ಸಾವು ನೋವು ಸಂಭವಿಸಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ತುರ್ತು ವೈದ್ಯಕೀಯ ಸೇವೆಯ ಮುಖ್ಯಸ್ಥ ಪಿರ್ಹೋಸೀನ್ ಕೌಲಿವಾಂಡ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದುರದೃಷ್ಟವಶಾತ್ ಸಂಭವಿಸಿದ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದಾರೆ. 35ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದಿದ್ದಾರೆ.
ಸೋಮವಾರ ಅಂತಿಮಯಾತ್ರೆಯಲ್ಲಿ 1 ಮಿಲಿಯನ್ ಜನರು ಪಾಲ್ಗೊಂಡಿದ್ದಾಗಿ ವರದಿಯಾಗಿದೆ. ಈ ಜನಸಂಖ್ಯೆಯಿಂದಲೇ ಸೊಲೈಮಾನಿ ಪ್ರಸಿದ್ಧತೆ ಎಷ್ಟಿತ್ತು ಎಂಬುದು ಗೊತ್ತಾಗುತ್ತಿದೆ ಎಂದು ಮಾಧ್ಯಮಗಳು ಹೇಳಿವೆ.
ಸೊಲೈಮಾನಿ ಸಾವಿನಿಂದ ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ಹೆಚ್ಚಾಗಿದ್ದು ಮಧ್ಯಪ್ರಾಚ್ಯ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. (ಏಜೆನ್ಸೀಸ್)