ನ್ಯೂಸ್

33 ಡಿಸಿಆರ್‌ಇ ಪೊಲೀಸ್ ಠಾಣೆ ಕಾರ್ಯಾರಂಭ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ಮೇಲಿನ ದೌರ್ಜನ್ಯ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಸ್ಥಾಪಿಸಿರುವ ಡಿಸಿಆರ್‌ಇ (ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ) ಪೊಲೀಸ್ ಠಾಣೆಗಳು ಸೋಮವಾರದಿಂದ ಕಾರ್ಯಾರಂಭ ಮಾಡಿವೆ.

1974ರಲ್ಲಿ ಸ್ಥಾಪನೆಯಾದ ಡಿಸಿಆರ್‌ಇ ಘಟಕಕ್ಕೆ ಪೊಲೀಸ್ ಠಾಣೆಯ ಸ್ಥಾನಮಾನ ಇರಲಿಲ್ಲ. ಎಸ್‌ಸಿ/ಎಸ್‌ಟಿ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995ರಂತೆ ರಕ್ಷಣಾ ಘಟಕವೆಂದು ಕರೆಯಲಾಗಿತ್ತು. ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಲು ಅಧಿಕಾರಿಗಳಿಗೆ ಸಾಧ್ಯವಿರಲಿಲ್ಲ. ಹೀಗಾಗಿ ಎ್ಐಆರ್ ದಾಖಲಿಸಲು ಸ್ಥಳೀಯ ಠಾಣೆಗೆ ಶಿಾರಸು ಮಾಡಲಾಗುತ್ತಿತ್ತು. ಸ್ಥಳೀಯ ಠಾಣೆಗಳಲ್ಲಿ ಕರ್ತವ್ಯದ ಒತ್ತಡಗಳಿಂದ ಪ್ರಕರಣಗಳ ತನಿಖೆ ನಡೆಸಿ, ನ್ಯಾಯಾಲಯಗಳಿಗೆ ದೋಷಾರೋಪಣ ಪಟ್ಟಿ ಸಲ್ಲಿಸಲು ವಿಳಂಬವಾಗುತ್ತಿತ್ತು.

ಇದನ್ನು ತಪ್ಪಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರು ನಗರಕ್ಕೆ 2 ಠಾಣೆಯಂತೆ ಒಟ್ಟು 33 ಡಿಸಿಆರ್‌ಇ ವಿಶೇಷ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈಗಿರುವ 340 ಹುದ್ದೆಗಳ ಜತೆಗೆ ಹೆಚ್ಚುವರಿಯಾಗಿ 450 ವಿವಿಧ ವೃಂದದ ಹುದ್ದೆಗಳನ್ನು ಸೃಷ್ಟಿಸಿ ಒಟ್ಟು 790 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.