ಸೊರಬದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಭಾರತಿ ಶೆಟ್ಟಿ , ಎಸ್.ಮಂಜುನಾಥ್, ಹುಸೇನ್ ಸರಕಾವಸ್, ಸಿ.ಆರ್.ಪರಮೇಶ್ವರಪ್ಪ, ಕೆ.ಆರ್.ಬಸವರಾಜ್ ಇತರರಿದ್ದರು. 
ನ್ಯೂಸ್

32 ಸಾವಿರ ಶಿಕ್ಷಕರ ವರ್ಗಾವಣೆ

ಸೊರಬ: ಶಿಕ್ಷಕರ ಕೊರತೆ ನೀಗಿಸುವ ಸಂಬಂಧ 13,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದ್ದು ತೀರ್ಮಾನ ಬಂದ ಕೂಡಲೆ ನೇಮಕಾತಿಪತ್ರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಪಟ್ಟಣದ ರಂಗಮಂದಿರದಲ್ಲಿ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ತೃಪ್ತಿಕರ ಶಿಕ್ಷಣ ನೀಡುವ ಉದ್ದೇಶ ನನ್ನದಾಗಿದ್ದು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕಗ್ಗಂಟಾಗಿರುವ ಶಿಕ್ಷಕರ ವರ್ಗಾವಣೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ತಿಂಗಳಲ್ಲಿ 32 ಸಾವಿರ ಶಿಕ್ಷಕರು ವರ್ಗಾವಣೆ ತೆಗೆದುಕೊಂಡು ಸಂತಸಗೊಂಡಿದ್ದಾರೆ. ಹಾಗೆಯೆ ಮಕ್ಕಳ ಹಿತದೃಷ್ಟಿಯಿಂದ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಅನುದಾನವನ್ನು ಶಾಲಾ ಅಭಿವೃದ್ಧಿಗೆ ಸರ್ಕಾರ ಮೀಸಲಿರಿಸಿದೆ. ಸರ್ಕಾರಿ ಶಾಲೆಗಳ ಪ್ರಗತಿ ನನ್ನ ಕನಸಾಗಿದ್ದು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಇದಕ್ಕೆ ಪೂರಕವಾಗಿ ಶಿಕ್ಷಕರ ಸಹಕಾರ ಮುಖ್ಯ. ಹಿಂದೆ ಶಿಕ್ಷಣ ಸವಲತ್ತುಗಳಿಲ್ಲದೆ ಮಕ್ಕಳನ್ನು ಪಾಲಕರು ಹೊಲಗದ್ದೆಗಳಿಗೆ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಊರಿಗೊಂದು ಶಾಲೆ ಮಾಡುವುದೇ ಅಂದಿನ ಅಭಿವೃದ್ಧಿಯಾಗಿತ್ತು. ಆದರೆ ಇಂದು ಆರ್ಥಿಕವಾಗಿ ಗ್ರಾಮೀಣ ಜನರು ಪ್ರಗತಿಯಾಗಿದ್ದಾರೆ. ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ ಓದಿಸುವ ಇಚ್ಛೆ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರತಿ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸುವ ಚಿಂತನೆ ಹೊಂದಿದೆ. ಆ ಶಾಲೆಗೆ ಹೋಗಲು ಇಚ್ಛೆ ಇರುವ ದೂರ ಪ್ರದೇಶದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪ್ರತಿಯೊಬ್ಬರ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಪಾಲಕರು ಮೊದಲ ಗುರುವಾಗಿದ್ದರೂ ಕೂಡ ಶಿಕ್ಷಕರ ಮಾರ್ಗದರ್ಶನ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಮನುಷ್ಯತ್ವ, ಮಾನವೀಯತೆ ಹೊಂದಿದಾಗ ಸದೃಢ ದೇಶ ಕಟ್ಟುವ ಕೆಲಸ ಸುಲಭವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಶಿಕ್ಷಕರ ವೃತ್ತಿ ಅಮೂಲ್ಯವಾದದ್ದು. ಶಿಕ್ಷಕರು ಮಾನವೀಯ ಮೌಲ್ಯಗಳನ್ನು ತಿಳಿಸಿದಲ್ಲಿ ಮಕ್ಕಳು ಉತ್ತಮ ಸಂಸ್ಕಾರದಿಂದ ಜೀವನದಲ್ಲಿ ವಿಕಾಸ ಹೊಂದಲು ಸಾಧ್ಯ ಎಂದು ಹೇಳಿದರು.
ಚಿಂತಕ ಭಾರ್ಗವ್ ನಾಡಿಗ್ ಉಳವಿ ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕರು ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಂಗವಿಕಲ ಮಕ್ಕಳಿಗೆ ವ್ಹೀಲ್‌ಚೇರ್ ವಿತರಿಸಲಾಯಿತು. ಶಿಕ್ಷಕರ ವಿವಿಧ ಸಂಘಟನೆಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ತಹಸೀಲ್ದಾರ್ ಹುಸೇನ್ ಸರಕಾವಸ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಡಯಟ್ ಉಪನಿರ್ದೇಶಕ ಕೆ.ಆರ್.ಬಸವರಾಜ್, ಇಒ ಡಾ.ಪ್ರದೀಪ್ ಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ದಯಾನಂದ್ ಕಲ್ಲೇರ್, ಮನೋಹರ್, ಲಿಂಗರಾಜ್ ಒಡೆಯರ್, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಹಾಲು ಒಕ್ಕೂಟದ ನಾಮನಿರ್ದೇಶಿತ ಸದಸ್ಯ ಕೆ.ಪಿ.ರುದ್ರಗೌಡ, ಅಣ್ಣಪ್ಪ ಹಾಲಘಟ್ಟ, ಎಚ್.ಗಣಪತಿ, ಸದಾನಂದಗೌಡ ಬಿಳಗಲಿ, ಎಂ.ಡಿ.ಉಮೇಶ್, ಪ್ರೇಮಾ, ಪ್ರಕಾಶ್ ಮಡ್ಲೂರ್, ಸಿ.ಪಿ.ಸದಾನಂದ್ ಸೇರಿದಂತೆ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು, ಅಧಿಕಾರಿಗಳು, ಪುರಸಭೆ ಸದಸ್ಯರು ಇತರರಿದ್ದರು. ಶಿಕ್ಷಣಾಧಿಕಾರಿ ಬಿ.ಎಂ.ಸತ್ಯನಾರಾಯಣ ಸ್ವಾಗತಿಸಿದರು. ಸಿಆರ್‌ಪಿ ರಾಘವೇಂದ್ರ ನಿರೂಪಿಸಿದರು. ಶಿಕ್ಷಕರು ನಾಡಗೀತೆ, ಪ್ರವೀಣ್ ಭಂಡಾರಿ ಮತ್ತು ವಿದ್ಯಾರ್ಥಿಗಳು ರೈತಗೀತೆ ಹಾಡಿದರು.