ನ್ಯೂಸ್

ಕಾಯಕ ವರ್ಷಕ್ಕೆ 32 ಸೂತ್ರ; ಕನ್ನಡದ ಕಲ್ಯಾಣ ಯೋಜನೆಗೆ ಸರ್ಕಾರದ ಸಂಕಲ್ಪ...

lakshmihegde

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕನ್ನಡಿಗರನ್ನು ಉದ್ಯಮಿಗಳನ್ನಾಗಿಸುವುದಕ್ಕೆ ಆರ್ಥಿಕ ನೆರವು, ಸರ್ಕಾರದ ವಸತಿ ಯೋಜನೆಗಳೆಲ್ಲ ಸಂಪೂರ್ಣ ಕನ್ನಡಿಗರಿಗೇ ಮೀಸಲು, ಹತ್ತನೇ ತರಗತಿಯವರೆಗೆ ಕನ್ನಡ ಕಡ್ಡಾಯಗೊಳಿಸಲು ಜಿಲ್ಲಾ ಮಟ್ಟದಿಂದ ವರದಿ ಪಡೆಯುವುದು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವುದು...

ಕರ್ನಾಟಕವನ್ನು ಕನ್ನಡಮಯಗೊಳಿಸುವ ಉದ್ದೇಶದಿಂದ ಕನ್ನಡ ಕಾಯಕ ವರ್ಷ ಆಚರಣೆಗಾಗಿ ರಾಜ್ಯ ಸರ್ಕಾರ ರೂಪಿಸಿರುವ 32 ಅಂಶಗಳ ಚೌಕಟ್ಟಿನ ಯೋಜನೆಯಲ್ಲಿರುವ ಪ್ರಮುಖಾಂಶಗಳಿವು.

ರಾಜ್ಯದಲ್ಲಿ ಕನ್ನಡ ಅಧಿಕೃತ ಆಡಳಿತ ಭಾಷೆಯಾಗಿದ್ದು ಸಚಿವಾಲಯದಿಂದ ಗ್ರಾಮ ಪಂಚಾಯಿತಿ ತನಕ ಪ್ರಧಾನವಾಗಿ ಬಳಸುವಂತಾಗಬೇಕೆಂಬ ಆಶಯ ಹೊಂದಲಾಗಿದೆ. ಇ-ಆಫೀಸ್ ವ್ಯವಸ್ಥೆ ತಂದಿದ್ದರೂ ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ ಎಂಬುದನ್ನು ಮನಗಂಡ ಸರ್ಕಾರ ಈ ವರ್ಷವನ್ನು ಕನ್ನಡ ಕಾಯಕ ವರ್ಷವನ್ನಾಗಿ ರೂಪಿಸಲು ಹೊರಟಿದೆ. ಕರೊನೋತ್ತರ ಕರ್ನಾಟಕದ ಎಲ್ಲ ವಲಯಗಳಲ್ಲೂ ಜೀವನೋತ್ಸಾಹ ತುಂಬುವ ಮೂಲಕ ಭವಿಷ್ಯದ ಕನ್ನಡವನ್ನು ಕಟ್ಟುವ ದೃಷ್ಟಿಯಿಂದ ಸರ್ಕಾರ ಹೊಸ ಯೋಜನೆ ರೂಪಿಸುತ್ತಿದೆ. ಆ ಮೂಲಕ ಕನ್ನಡವನ್ನು ಇನ್ನಷ್ಟು ಸಮೃದ್ಧಗೊಳಿಸುವ ಆಶಯವನ್ನು ಹೊಂದಿದೆ.

ಎಲ್ಲ ಇಲಾಖೆಗಳು ಭಾಗಿ: ಕನ್ನಡ ಕಟ್ಟುವುದು ಒಂದು ಇಲಾಖೆಯ ಕೆಲಸವಲ್ಲ. ಆದ್ದರಿಂದ ಬೇರೆ ಬೇರೆ ಪ್ರಮುಖ ಇಲಾಖೆಗಳಿಗೂ ಜವಾಬ್ದಾರಿ ನೀಡಲಾಗಿದೆ. ಕೆಲವೊಂದು ಯೋಜನೆಗಳನ್ನು ಆಯಾ ಇಲಾಖೆಗಳ ಮೂಲಕವೇ ಅನುಷ್ಠಾನ ಮಾಡಲಾಗುತ್ತದೆ.

ಸಾರ್ವಜನಿಕರು ಭಾಗಿ: ಸರ್ಕಾರದ ಇಲಾಖೆಗಳ ಜತೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಹ ಕಾಯಕ ವರ್ಷದಲ್ಲಿ ಪಾಲ್ಗೊಳ್ಳುವುಂತೆ ಮಾಡಲಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕವಾದ ಮನವಿಯನ್ನು ಸಿದ್ಧಪಡಿಸಲಾಗಿದೆ. ಅದರ ಮೂಲಕ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.

ಬ್ಯಾಂಕ್​ಗಳಲ್ಲಿ ಕನ್ನಡ: ಬ್ಯಾಂಕ್​ಗಳಲ್ಲಿ ಜನೋಪಯೋಗಕ್ಕೆ ಬಳಸುವ ಚಲನ್, ನಮೂನೆ, ಅರ್ಜಿಗಳು ಕನ್ನಡದಲ್ಲಿರುವಂತೆ ನೋಡುವುದು. ಎಟಿಎಂಗಳಲ್ಲಿ ಕನ್ನಡದ ಬಳಕೆ, ಬ್ಯಾಂಕ್ ನೇಮಕಾತಿ ನೀತಿಯನ್ವಯ ಕನ್ನಡೇತರರು ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಎಸ್​ಎಲ್​ಬಿಸಿ ಸಭೆಯಲ್ಲಿ ಕಡ್ಡಾಯ ಪರಿಶೀಲನೆ. ಕೇಂದ್ರ ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್​ಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಬಗ್ಗೆ ಪರಿಶೀಲನೆ. ಹಿಂದಿ ಅನುಷ್ಠಾನ ಅಧಿಕಾರಿ ರೀತಿ ಕನ್ನಡ ಅನುಷ್ಠಾನ ಅಧಿಕಾರಿ ಕಡ್ಡಾಯವಾಗಿ ಇರಬೇಕು.

ಕಾಯಕ ವರ್ಷದ ಇತರ ಅಂಶ

  • ಪ್ರಾಥಮಿಕ ಹಂತದ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ರೂಪಿಸಲು ಕ್ರಮ, ಉನ್ನತ ಶಿಕ್ಷಣದಲ್ಲಿ ಹಂತ ಹಂತವಾಗಿ ಕನ್ನಡ ಜಾರಿ
  • ರಾಜ್ಯದಲ್ಲಿ ನಡೆಸುವ ಎಲ್ಲ ಉತ್ಸವ, ಸಮಾರಂಭಗಳಲ್ಲಿ ರಾಜ್ಯದ ನೆಲ-ಜಲ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳಿರಬೇಕು, ರಾಜ್ಯದ ಕಲಾವಿದರಿಗೆ ಆದ್ಯತೆ ಸಿಗಬೇಕು
  • ಸರ್ಕಾರದ ಲೆಟರ್​ಹೆಡ್​ಗಳಲ್ಲಿ, ಜಾಹೀರಾತುಗಳಲ್ಲಿ ಕನ್ನಡ ಕಾಯಕ ವರ್ಷ ಎಂದಿರಬೇಕು
  • ಪದಕೋಶಗಳನ್ನು ಡಿಜಿಟಲ್ ಮಾದರಿಯಲ್ಲಿ ನೀಡಬೇಕು
  • ಸರ್ಕಾರದ ಎಲ್ಲ ಜಾಲತಾಣಗಳ ಮುಖಪುಟ ಹಾಗೂ ಒಳಪುಟಗಳಲ್ಲಿ ಕನ್ನಡ ಇರಬೇಕು
  • ನಾಮಫಲಕ, ಹೆದ್ದಾರಿ ಫಲಕ, ಮೈಲಿಗಲ್ಲು ಕಡ್ಡಾಯವಾಗಿ ಕನ್ನಡದಲ್ಲಿರಬೇಕು
  • ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ ಹೆಚ್ಚಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಸೌಲಭ್ಯವನ್ನು ಯೂಟ್ಯೂಬ್ ಚಾನಲ್ ಮೂಲಕ ನೀಡುವುದು
  • ಖಜಾನೆ, ಎಚ್​ಆರ್​ಎಂಎಸ್, ಟೆಂಡರ್ ತಂತ್ರಾಂಶಕ್ಕೆ ಕನ್ನಡದ ಆಪ್​ಗಳನ್ನು ರೂಪಿಸುವುದು
  • ಪ್ರತಿ ತಿಂಗಳ ಮಾಸಿಕ ಪ್ರಗತಿ ಪರಿಶೀಲನೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆಯೂ ಪರಿಶೀಲನೆ ಕಡ್ಡಾಯ ಮಾಡುವುದು
  • ಕಾಯ್ದೆ, ಕಾನೂನು, ಸಚಿವ ಸಂಪುಟ ಟಿಪ್ಪಣಿಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು
  • ರಾಜ್ಯದಲ್ಲಿ ತಯಾರಾಗುವ ಉತ್ಪನ್ನ, ಪದಾರ್ಥ, ವಸ್ತುಗಳ ಬ್ರಾಂಡ್ ಮತ್ತಿತರ ಮಾಹಿತಿ ಕನ್ನಡದಲ್ಲಿರಬೇಕು
  • ನಿಗಮ, ಮಂಡಳಿ, ಇಲಾಖೆ, ಪ್ರಾಧಿಕಾರಗಳು ಸೇರಿ ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳ ಎಲ್ಲ ದಾಖಲೆ, ವರದಿಗಳು ಕನ್ನಡದಲ್ಲಿರಬೇಕು
  • ಕನ್ನಡ ಅಭಿವೃದ್ಧಿಯ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು
  • ಜಿಲ್ಲೆಗಳಲ್ಲಿ ಪ್ರಮುಖ ರಸ್ತೆಗಳಿಗೆ ನಾಡಿನ ಸಾಹಿತಿ, ಕಲಾವಿದರ ಹೆಸರಿಡುವುದು, ಪ್ರತಿಮೆಗಳನ್ನು ಅನಾವರಣಗೊಳಿಸುವುದು
  • ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡುವ ಚಿಕಿತ್ಸೆಯ ವಿವರ ಕಡ್ಡಾಯವಾಗಿ ಕನ್ನಡದಲ್ಲಿರಬೇಕು
  • ಸಹಕಾರ ಸಂಘಗಳು, ಸಂಘ, ಸಂಸ್ಥೆಗಳ ಉಪನಿಯಮ, ನೋಂದಣಿ ಕನ್ನಡದಲ್ಲಿರಬೇಕು.
  • ಜಿಲ್ಲೆಗಳಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿ, ಉದ್ದಿಮೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಬಗ್ಗೆ ಡಿಸಿಗಳು ಕಾಲಕಾಲಕ್ಕೆ ವರದಿ ಸಲ್ಲಿಸಬೇಕು.

ಏನೇನು ಕಾಯಕಲ್ಪ?

ಹಳೆಯದಕ್ಕೆ ಪರಿಹಾರ: ಆಡಳಿತದಲ್ಲಿ ಕನ್ನಡದ ಅನುಷ್ಠಾನ, ಹತ್ತನೇ ತರಗತಿಯ ತನಕ ಕನ್ನಡದಲ್ಲಿ ಬೋಧನೆ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದಂತಹ ಹಳೆಯ ಸಮಸ್ಯೆಗಳಿಗೆ ಕನ್ನಡ ಕಾಯಕ ವರ್ಷದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ

ಉದ್ಯಮಿಗಳಾಗಿ ಕನ್ನಡಿಗರು: ರಾಜ್ಯಕ್ಕೆ ಬಂಡವಾಳ ಹೂಡಲು ಬರುವವರೆಲ್ಲ ಬಹುತೇಕ ಪರಭಾಷಿಕರೇ ಆಗಿದ್ದಾರೆ. ಆದರೆ ಕರೊನಾ ಸಂಕಷ್ಟದ ಅವಧಿಯಲ್ಲಿ ಕನ್ನಡಿಗರನ್ನು ಉದ್ಯಮಿಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ. ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಆರ್ಥಿಕ ನೆರವು ಜತೆಯಲ್ಲೇ ತೆರಿಗೆ ವಿನಾಯಿತಿ, ಮೂಲಸೌಕರ್ಯಗಳಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಲಾಗುತ್ತದೆ

ವಸತಿ ಯೋಜನೆ ಕಡ್ಡಾಯ: ಕರ್ನಾಟಕ ಗೃಹ ಮಂಡಳಿ, ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನೀಡುವ ನಿವೇಶನ, ಮನೆಗಳನ್ನು ಕನ್ನಡಿಗರಿಗೆ ಕಡ್ಡಾಯವಾಗಿ ನೀಡಲು ನಿಯಮಗಳನ್ನು ರೂಪಿಸಲಾಗುತ್ತದೆ

ತಂತ್ರಜ್ಞಾನದಲ್ಲಿ ಕನ್ನಡ: ಆಡಳಿತ ಸಂಬಂಧಿ ಪತ್ರ ವ್ಯವಹಾರ, ಕಡತ ನಿರ್ವಹಣೆ, ಅಂತರ್ಜಾಲ, ಸಾಮಾಜಿಕ ಜಾಲತಾಣ, ಯೋಜನೆಗಳ ಪ್ರಚಾರದಲ್ಲಿ ಕನ್ನಡ ಯೂನಿಕೋಡ್ ತಂತ್ರಾಂಶ ಬಳಕೆ. ಇ-ಕಚೇರಿ, ಧ್ವನಿಯಿಂದ ಪಠ್ಯ, ಪಠ್ಯದಿಂದ ಧ್ವನಿ, ಆಡಿಯೋ ಪುಸ್ತಕ, ಡಿಜಿಟಲ್ ನಿಘಂಟು ಸಮರ್ಪಕ ಬಳಕೆ

ಕನ್ನಡ ಕಡ್ಡಾಯಕ್ಕೆ ವರದಿ: ರಾಜ್ಯದಲ್ಲಿರುವ ಎಲ್ಲ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ತನಕ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕನ್ನಡ ಬಳಸಲು ಜಿಲ್ಲೆಯ ಎಲ್ಲ ಶಾಲೆಗಳಿಂದ ಕ್ರೋಡೀಕೃತ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಿಲ್ಲಾಧಿಕಾರಿಗಳಿಂದ ಪಡೆಯುವುದು

ಕನ್ನಡಿಗರಿಗೆ ಉದ್ಯೋಗ: ಖಾಸಗಿ, ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಶೇ. 100 ಉದ್ಯೋಗ ನೀಡುವ ಬಗ್ಗೆ ಕ್ರಮ; ಈ ಬಗ್ಗೆ ತಕ್ಷಣ ಮಸೂದೆ ರೂಪಿಸುವುದು

ಅನುಷ್ಠಾನ ವಿಭಾಗ ರಚನೆ: ಸಚಿವಾಲಯದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಲು ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಕನ್ನಡ ಅನುಷ್ಠಾನ ವಿಭಾಗದ ರಚನೆ