ನ್ಯೂಸ್

41 ಸೆಕೆಂಡ್​ಗಳಲ್ಲಿ 31 ಬಾರಿ ಕಪಾಳಮೋಕ್ಷ! ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದವನಿಗೆ ಹಿಗ್ಗಾಮುಗ್ಗಾ ಥಳಿತ

31 Slaps In 41 Seconds: ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಭೇಟಿ ನೀಡಿದ ವ್ಯಕ್ತಿಯೊಬ್ಬನಿಗೆ ಸುಧಾಕರ್ ಕಶ್ಯಪ್ ಎಂದು ಗುರುತಿಸಲಾದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬರೋಬ್ಬರಿ 31 ಬಾರಿ ಕಪಾಳಮೋಕ್ಷ ಮಾಡಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಸಹಾಯಕ ವ್ಯಕ್ತಿಯ ಮೇಲೆ ಮನಬಂದಂತೆ ವರ್ತಿಸಿದ ಸುಧಾಕರ್​, 41 ಸೆಕೆಂಡ್​ಗಳಲ್ಲಿ ಬರೋಬ್ಬರಿ 31 ಬಾರಿ ಕಪಾಳಕ್ಕೆ ಹೊಡೆದಿರುವುದು ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದೆ. ಸದ್ಯ ಈ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋವನ್ನು ಥಳಿತಕ್ಕೆ ಒಳಗಾದ ವ್ಯಕ್ತಿಯೇ ಚಿತ್ರೀಕರಿಸಿದ್ದಾನೆ ಎಂದು ಹೇಳಲಾಗಿದೆ. ಪೊಲೀಸ್ ಠಾಣೆಗೆ ಭೇಟಿ ನೀಡಿದ ಈತ, ತನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲು ಬಂದಿದ್ದ. ಆದರೆ, ವ್ಯಕ್ತಿಯ ಉದ್ದೇಶವೇನು ಎಂದು ಕೇಳದ ಅಧಿಕಾರಿ, ಕೋಪದಲ್ಲಿ ಆತನನ್ನು ಮನಬಂದಂತೆ ಥಳಿಸಿದ್ದಾನೆ. ಸುಧಾಕರ್​ ಯುವಕನನ್ನು ಎಳೆದೊಯ್ದಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ನನಗ್ಯಾಕೆ ಹೊಡೆಯುತ್ತಿದ್ದೀರಿ, ನಾನೇನು ಮಾಡಿದೆ ಎಂದು ಯುವಕ ಕೇಳಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪೊಲೀಸ್ ಅಧಿಕಾರಿ ಅಮಾನತು

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಝಾನ್ಸಿ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನ್ಯಾಯ ಕೋರಿ ಠಾಣೆಗೆ ಬಂದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).