ನ್ಯೂಸ್

30ರಂದು ಉದ್ಯೋಗ ಮೇಳ, 31ಕ್ಕೆ ರಕ್ತದಾನ ಶಿಬಿರ

ನಂಜನಗೂಡು: ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ ಅವರ ಹುಟ್ಟುಹಬ್ಬದ ಅಂಗವಾಗಿ ಜು.30ರಂದು ಬೃಹತ್ ಉದ್ಯೋಗ ಮೇಳ, 31ರಂದು ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.


ಆರ್.ಧ್ರುವನಾರಾಯಣ ಅವರು ತಮ್ಮ ರಾಜಕೀಯ ಜೀವನದಲ್ಲಿ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸಬೇಕೆಂಬ ತುಡಿತವನ್ನು ಹೊಂದಿದ್ದರು. ಅವರ ಸ್ಮರಣಾರ್ಥ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಬೇಕೆಂಬ ಉದ್ದೇಶದಿಂದ ಅವರ ಅಭಿಮಾನಿ ಬಳಗದಿಂದ ಬೃಹತ್ ಉದ್ಯೋಗ ಮೇಳವನ್ನು ಜು.30ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಗರದ ಜೆಎಸ್‌ಎಸ್ ಮಂಗಳಮಂಪಟದಲ್ಲಿ ಆಯೋಜಿಸಲಾಗಿದೆ. 100ಕ್ಕೂ ಅಧಿಕ ಕಾರ್ಖಾನೆಗಳು, ಕಂಪನಿಗಳು ಭಾಗವಹಿಸಲಿವೆ. ನಂಜನಗೂಡು ಸೇರಿದಂತೆ ಸುತ್ತಲಿನ ಯುವಕರು, ಯುವತಿಯರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.


ಆರ್.ಧ್ರುವನಾರಾಯಣ ಜನ್ಮ ದಿನವಾದ ಜು.31ರಂದು ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಪ್ಯಾಲೇಸ್‌ನಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಹುಲ್ಲಹಳ್ಳಿ ಗ್ರಾಮದ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಅಯೋಜಿಸಲಾಗಿದ್ದು, ತಾಲೂಕಿನ ಜನತೆ ಇದರ ಉಪಯೋಗ ಪಡೆದುಕೊಳ್ಳಬಹುದು ಎಂದರು.


ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಂ.ಶಂಕರ್, ಶ್ರೀಕಂಠನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ದೇಬೂರು ಅಶೋಕ್, ಹುಂಡಿ ನಾಗರಾಜು, ಹಗಿನವಾಳು ಬಸವಣ್ಣ, ಅಜಯ್, ಸತೀಶ್‌ಗೌಡ, ಕೆರೆಹಳ್ಳಿ ರಘು ಇತರರಿದ್ದರು.