fertilizer 
ನ್ಯೂಸ್

3 ವರ್ಷದಲ್ಲಿ 3014 ಮೆ. ಟನ್ ರಸಗೊಬ್ಬರ ವಶ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆಯ ಜಾಗೃತ ದಳದಿಂದ 12 ಕೋಟಿ ಮೌಲ್ಯದ ಗೊಬ್ಬರ ಪತ್ತೆ
  • ಸಹಾಯಧನದ ಯೂರಿಯಾ ರಸಗೊಬ್ಬರ ಕೃಷಿಯೇತರ ಬಳಕೆಗೆ ನಿರ್ಬಂಧ
ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಮಾರಾಟಕ್ಕೆ ಸಂಬಂಧಿಸಿ ದೂರು ಆಧರಿಸಿ 1,001 ಪ್ರಕರಣಗಳನ್ನು ದಾಖಲಿಸಿ ತಪ್ಪಿತಸ್ಥರ ವಿರುದ್ಧ ನ್ಯಾಯಾಲಯದಲ್ಲಿ ಮೊದಕದ್ದಮೆ ದಾಖಲಿಸಲಾಗಿದೆ. ಈ ರೀತಿ ಮೂರು ವರ್ಷದಲ್ಲಿ 27.26 ಕೋಟಿ ರೂ. ಮೌಲ್ಯದ ಬಿತ್ತನೆ ಕಾರ್ಯಕ್ಕೆ ಬಳಸುವ ಉತ್ಪನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ತಯಾರಿಕೆ, ಅನಧಿಕೃತ ಮಾರಾಟ ಸೇರಿದಂತೆ ರೈತರಿಗೆ ವಂಚಿಸುವ ಪ್ರಕರಣಗಳನ್ನು ಭೇದಿಸಲು ಇಲಾಖಾ ಮಟ್ಟದಲ್ಲಿ ಜಾಗೃತ ದಳ ಸಕ್ರಿಯವಾಗಿದೆ. ಪ್ರತಿ ಜಿಲ್ಲೆಯಲ್ಲೂ ದಳದ ಅಧಿಕಾರಿಗಳು ದೂರು ಬಂದ ಸ್ಥಳಗಳ ಮೇಲೆ ರೇಡ್ ಮಾಡಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸುತ್ತಿದ್ದಾರೆ. ಇಂತಹ 189 ಪ್ರಕರಣಗಳಲ್ಲಿ ನ್ಯಾಯಾಲಯ ಅಂತಿಮ ತೀರ್ಪು ನೀಡಿದ್ದು, 64.96 ಲಕ್ಷ ರೂ. ದಂಡದ ಹಣವನ್ನು ಉತ್ಪಾದಕರು ಹಾಗೂ ಮಾರಾಟಗಾರರಿಗೆ ವಿಧಿಸಿ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು:

ಕಳೆದ 3 ವರ್ಷದಲ್ಲಿ 12.57 ಕೋಟಿ ರೂ. ಮೌಲ್ಯದ 3,014 ಮೆ. ಟನ್ ರಸಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸಂಬಂಧಿಸಿ 400 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕಾರ್ಖಾನೆ ಬಳಕೆಗಾಗಿ ಸಾಗಿಸುತ್ತಿದ್ದ 541 ಮೆ. ಟನ್ ರಿಯಾಯಿತಿ ದರದ ಯೂರಿಯಾವನ್ನು ವಶಕ್ಕೆ ಪಡೆದಿದ್ದು, 24 ಪ್ರಕರಣಗಳಲ್ಲಿ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಜತೆಗೆ 95 ರಸಗೊಬ್ಬರ ಪರವಾನಗಿ ಅಮಾನತು ಮಾಡಿದ್ದು, 87 ಪರವಾನಗಿಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕ್ರಮದ ಹೊರತಾಗಿಯೂ ಯೂರಿಯಾವನ್ನು ಅಕ್ರಮ ಸಾಗಣೆ ಮತ್ತು ಬಳಕೆ ತಡೆಗಟ್ಟಲು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಎರಡೂ ಇಲಾಖೆಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ವಿವರಿಸಿದ್ದಾರೆ.

ಕೃಷಿಯೇತರ ಬಳಕೆಗೆ ನಿರ್ಬಂಧ:

ಸಹಾಯಧನದ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗೆ ನಿರ್ಬಂಧ ವಿಧಿಸಲಾಗಿದೆ. ಇದರ ಹೊರತಾಗಿಯೂ ನಿಯಮ ಉಲ್ಲಂಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆಯ ಅಪರ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಜಾಗೃತ ಕೋಶ ರಚಿಸಿದ್ದು, ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಜಂಟಿ ಕೃಷಿ ನಿರ್ದೇಶಕರು ತಮ್ಮ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ. ದೂರುಗಳನ್ನು ಆಧರಿಸಿ ಸ್ಥಳೀಯವಾಗಿ ದಾಲಿ ನಡೆಸುವ ಅಧಿಕಾರವನ್ನೂ ಸರ್ಕಾರ ನೀಡಿದೆ.