ನ್ಯೂಸ್

30 ಸಾಧಕರಿಗೆ ಜ್ಞಾನ ಜ್ಯೋತಿ ಡಿವಿಜಿ ಪ್ರಶಸ್ತಿ ಪ್ರದಾನ

ಲೇಖಕಿ ಡಾ.ಮಂಜುಳಾ ಪಾವಗಡ ರಚನೆಯ ‘ಪಾಲಸಖಿ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಭಾನುವಾರ ನೆರವೇರಿತು.

ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ವಿಜಯ ನಗರದಲ್ಲಿನ ಕಸಾಪ ಭವನದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಕಾದಂಬರಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಂಜುಳಾ ಪಾವಗಡ ಅವರ ಸಾಹಿತ್ಯ ಕ್ಷೇತ್ರದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದ 30 ಸಾಧಕರಿಗೆ ಜ್ಞಾನ ಜ್ಯೋತಿ ಡಿವಿಜಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜತೆಗೆ ಮಕ್ಕಳಿಂದ ಜಾನಪದ ಕಲರವ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಕವಿ ಗೋಷ್ಠಿ ನಡೆಯಿತು. ಉದಯೋನ್ಮುಖ ಕವಿಗಳಿಂದ ಹಿಡಿದು ಹಿರಿಯ ಕವಿಗಳು ಭಾಗವಹಿಸಿ ತಮ್ಮ ನೆಚ್ಚಿನ ಕವನ ವಾಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಉಪಾಧ್ಯಕ್ಷ ತ್ಯಾಗರಾಜು, ಸಮಾಜ ಸೇವಕ ರಘುರಾಮ್ ವಾಜಪೇಯಿ, ಸಾಹಿತಿ ಮಹೇಶ್ ಕೋಡಿ, ಅಂಬುಜಾ ಪ್ರಕಾಶ್, ಗುಣವಂತ ಮಂಜು, ನಟ ರವಿ ಸಂತೋಷ್, ಕೆಂಪರಾಜು, ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ಇತರರಿದ್ದರು.