ನ್ಯೂಸ್

ವಿಜಯನಗರದ ಹೊಸಪೇಟೆಯಲ್ಲಿ ಈ ಹಳ್ಳಿಯ ಜನರಿಗೆ 30 ವರ್ಷ ಹಳೆ ಸಮಸ್ಯೆ ಇನ್ನೂ ಜೀವಂತ!

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅವ್ಯವಸ್ಥೆಯೊಂದು ಕಂಡುಬಂದಿದ್ದು ಕಳೆದ 30 ವರ್ಷದ ಹಿಂದಿನ ಸಮಸ್ಯೆ ಇಂದಿಗೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ.

1991ರಲ್ಲೇ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿನ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕಳೆದ 30 ವರ್ಷಗಳಿಂದ ದಿಕ್ಕೇ ಇಲ್ಲದಂತೆ ಈ ಗ್ರಾಮದ ನಿವಾಸಿಗಳು ವಾಸಿಸುತ್ತಿದ್ದಾರೆ. ಹೊಸಪೇಟೆಯಿಂದ ಕೇವಲ ನಾಲ್ಕಾರು ಕಿ.ಮೀ ದೂರದಲ್ಲಿನ ಗ್ರಾಮಸ್ಥರ ಕಥೆ-ವ್ಯತೆ ಕೇಳೋರಿಲ್ಲ

ಹೀಗಾಗಿ ಸಮಸ್ಯೆ ನಿವಾರಣೆ ಮಾಡಿ ಎಂದು ಗ್ರಾಮಸ್ಥರು ಕೈಮುಗಿದು ಕೇಳುತ್ತಿದ್ದಾರೆ. ಹೊಸಪೇಟೆಯಲ್ಲಿ ಶಾಸಕರಾಗಿ ರತನ್​ಸಿಂಗ್ ಹಾಗೂ ಮುಖ್ಯಮಂತ್ರಿಯಾಗಿ ಬಂಗಾರಪ್ಪ ಇದ್ದಾಗ ಬಡವರಿಗೆ ನಿವೇಶನ ಕೊಡಲಾಗಿತ್ತು. ಸರಿ ಸುಮಾರು 92 ಜನಕ್ಕೆ ಆಶ್ರಯ ಯೋಜನೆ ಅಡಿ ನಿವೇಶನ ಹಂಚಲಾಗಿತ್ತು. ಬಳಿಕ 1992 ರ ಆಸುಪಾಸಿನಲ್ಲಿ ಜನರಿಗೆ‌ ನಿವೇಶನ ಹಕ್ಕುಪತ್ರ ಕೂಡಾ ನೀಡಲಾಗಿದೆ. ಅಂದಿನಿಂದ ಇಂದಿನವರೆಗೆ ಮೂಲಭೂತ ಸೌಕರ್ಯ ಸಿಗದೇ ಗುಡಿ ಓಬಳಾಪುರ ಗ್ರಾಮ ಅತಂತ್ರವಾಗಿದೆ.

ಈ ಗ್ರಾಮಕ್ಕೆ ಕಾಲಿಟ್ಟರೆ ಕೇವಲ ಹರುಕಲು ಚಪ್ಪರ, ಮುರುಕಲು ಗುಡಿಸಲುಗಳ ದರ್ಶನವಾಗುತ್ತದೆ. ಈ ಗ್ರಾಮದಲ್ಲಿ ವಾಸವಿರುವ 92ಕ್ಕೂ ಅಧಿಕ ಬಡ ಕುಟುಂಬಗಳು ಗುಡಿಸಲಿನಲ್ಲೇ ನಿತ್ಯ ವಾಸ ಮಾಡುತ್ತಿವೆ. ಆನಂದ್ ಸಿಂಗ್ ಪ್ರತಿನಿಧಿಸುತ್ತಿರುವ ವಿಜಯನಗರ ಕ್ಷೇತ್ರದ ಗುಡಿ ಓಬಳಾಪುರದಲ್ಲಿ ಇಂತಹ ಸಮಸ್ಯೆ ಬೆಳಕಿಗೆ ಬಂದಿದೆ.

ಹೊಸಪೇಟೆಯಿಂದ ಕೇವಲ ನಾಲ್ಕಾರು ಕಿ.ಮೀ ದೂರದಲ್ಲಿ ಗುಡಿ ಓಬಳಾಪುರ ಗ್ರಾಮ ಇದ್ದು, ಇಲ್ಲಿ 650 ಮತದಾರರು ಇದ್ದಾರೆ. ಮೂಲಸೌಕರ್ಯಕ್ಕಾಗಿ ಸ್ವತಃ ಆನಂದ್ ಸಿಂಗ್​ 26 ಲಕ್ಷ ಅನುದಾನ ಮೀಸಲು ನೀಡಿದ್ದಾರೆ. ಹಣವನ್ನು ಮೀಸಲಿರಿಸಿ ನಾಲ್ಕಾರು ವರ್ಷ ಕಳೆದರೂ ಅನುದಾನ ಮಾತ್ರ ಬಳಕೆ ಆಗದೇ ಹಾಗೆ ಹಾಗೇ ಕೊಳೆಯುತ್ತಿದೆ.

ಲೆಕ್ಕ ತೋರಿಸಲು ಅಧಿಕಾರಿಗಳು ಇದೇ ಅನುದಾನದ ಅಡಿ ಎರಡು ಚರಂಡಿ ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ ಎನ್ನಲಾಗಿದೆ. ಸರ್ವೇ ನಂಬರ್ 44 ರಲ್ಲಿ 5.22 ಸೆನ್ಸ್ ಭೂಮಿಯಲ್ಲಿ 92 ಜನಕ್ಕೆ ನಿವೇಶನ ಸರ್ಕಾರ ಮೀಸಲಿಟ್ಟಿದೆ.