ನ್ಯೂಸ್

ಮಂಗಳೂರು: ಪ್ರವಾಸಕ್ಕೆ ಬಂದಿದ್ದ ಗುರುಗ್ರಾಮ್ ನಿವಾಸಿ ಈಜುಕೊಳದಲ್ಲಿ ದುರಂತ ಸಾವು!

ಮಂಗಳೂರು: 30 ವರ್ಷದ ವ್ಯಕ್ತಿಯೊಬ್ಬರು ಸ್ವಿಮಿಂಗ್ ಪೂಲ್​ನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರಿನ ಮಂಗಳಾ ಈಜುಕೊಳದಲ್ಲಿ ಮಂಗಳವಾರ (ಡಿ.12) ವರದಿಯಾಗಿದೆ. ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಶೀಘ್ರವೇ ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ವ್ಯಕ್ತಿ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಮೃತ ವ್ಯಕ್ತಿಯನ್ನು ಗುರುಗ್ರಾಮ ಮೂಲದ ಅಭಿಷೇಕ್ ಆನಂದ್ ಎಂದು ಗುರುತಿಸಲಾಗಿದ್ದು, ವ್ಯಕ್ತಿ ಮಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದ ಎಂದು ಹೇಳಲಾಗಿದೆ. ಈ ವೇಳೆ ಮೋಜಿನಿಂದ ಕೂಡಿದ್ದ ದಿನದಂದು ಜನಪ್ರಿಯ ಮಂಗಳಾ ಈಜುಕೊಳದಲ್ಲಿ ಈಜಲು ಹೋಗಿ ದಾರುಣವಾಗಿ ಸಾವನ್ನಪಿದ್ದಾರೆ.

ಸ್ವಿಮಿಂಗ್ ಪೂಲ್ ಬಳಿ ಜೀವರಕ್ಷಕರು ಮತ್ತು ಹಲವಾರು ಜನರು ಸ್ಥಳದಲ್ಲಿದ್ದರು ಕೂಡ ರಕ್ಷಣೆ ಮಾಡುವಲ್ಲಿ ವಿಫಲವಾಗಿದ್ದಾರೆ. ಆನಂದ್​ ಕೊಳದ ಆಳವಾದ ಜಾಗಕ್ಕೆ ಪ್ರವೇಶಿಸಿದ ಬಳಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಭಿಷೇಕ್ ಆನಂದ್ ಮುಳುಗಲು ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಜೀವರಕ್ಷಕರ ಉಪಸ್ಥಿತಿಯ ಹೊರತಾಗಿಯೂ ಘಟನೆ ಸಂಭವಿಸಿದೆ ಎಂದು ಪರಿಗಣಿಸಿ, ಅವರಿಗೆ ಈಜುವ ಕೌಶಲ್ಯ ಇತ್ತೋ ಅಥವಾ ಇರಲಿಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಮೃತ ಅಭಿಷೇಕ್ ಕುಟುಂಬದ ಸದಸ್ಯರು ಇಂದು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).