ನ್ಯೂಸ್

ಯುವತಿಯರನ್ನು ನಂಬಿಸಿ, ಬೆದರಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ: ಪೊಲೀಸ್ ಬಲೆಗೆ ಬಿದ್ದ ನಟಿ ನಂದಿತಾ!

ಕೋಲ್ಕತ: ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ರೀತಿಯಲ್ಲೇ ಮತ್ತೊಬ್ಬ ನಟಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ನಟಿಯ ಹೆಸರು ನಂದಿತಾ ದತ್ತ. ಈಕೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ ಮೂಲದ ಮಾಡೆಲ್​ ಕಂ ನಟಿ.

ನಂದಿತಾ ಜತೆಯಲ್ಲಿ ಆಕೆಯ ಆಪ್ತ ಸಹಾಯಕ ಮೈನಕ್​ ಘೋಷ್​ ಎಂಬಾತನು ಸಹ ಪ್ರಕರಣದಲ್ಲಿ ಬಂಧಿಯಾಗಿದ್ದಾನೆ. ಮಾಡೆಲ್​ ಅಥವಾ ಸಿನಿಮಾ ಲೋಕದಲ್ಲಿ ಮಿಂಚಬೇಕು ಎಂಬ ಅತಿಯಾಸ ಆಸೆ ಇಟ್ಟುಕೊಂಡಂತಹ ಯುವತಿಯರನ್ನು ಬಲವಂತವಾಗಿ ಅಶ್ಲೀಲ ವಿಡಿಯೋಗಳಲ್ಲಿ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪವಿದೆ.

ಒಟಿಟಿ ಮುಖ್ಯವಾಹಿನಿಯಲ್ಲಿ ಒಳ್ಳೆಯ ಬ್ರೇಕ್​ ಕೊಡುತ್ತೇವೆ ಎಂಬ ಸುಳ್ಳು ಭರವಸೆಯನ್ನು ನೀಡಿ ಅಥವಾ ಬೆದರಿಸಿ ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ನ್ಯಾನ್ಸಿ ಭಾಬಿ ಅಂತಲೂ ಪರಿಚಿತವಾಗಿರುವ ನಂದಿತಾ ಅನೇಕ ಅರೆ ಅಶ್ಲೀಲ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 30 ವರ್ಷದ ನಂದಿತಾ ಮತ್ತು ಮೈನಕ್​ ಇಬ್ಬರನ್ನು​ ಪಶ್ಚಿಮ ಬಂಗಾಳದ ದಮ್​ ದಮ್​ ಮತ್ತು ನಕ್ತಾಲಾ ಏರಿಯಾದಲ್ಲಿ ಬಂಧಿಸಲಾಗಿದೆ. ಇಬ್ಬರು ಯುವ ಮಾಡೆಲ್​ಗಳು ಜುಲೈ 26ರಂದು ನ್ಯೂ ಟೌನ್​ ಪೊಲೀಸ್​ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.

ಬಲ್ಲಿಗುಂಗೆ ಪ್ರದೇಶದಲ್ಲಿರುವ ಸ್ಟುಡಿಯೋದಲ್ಲಿ ಬಲವಂತವಾಗಿ ಬೆತ್ತಲೆ ವಿಡಿಯೋದಲ್ಲಿ ಭಾಗವಹಿಸುವಂತೆ ಮಾಡಿದರು. ಅಲ್ಲದೆ, ನ್ಯೂ ಟೌನ್​ ಹೋಟೆಲ್​ನಲ್ಲಿ ನನ್ನ ಸ್ನೇಹಿತೆಯನ್ನು ಬಲವಂತವಾಗಿ ವಯಸ್ಕರ ಚಿತ್ರದಲ್ಲಿ ಭಾಗವಹಿಸುವಂತೆ ಮಾಡಿದರು ಎಂದು ಸಂತ್ರಸ್ತೆ ಮಾಡೆಲ್​ ಒಬ್ಬಳು ಆರೋಪಿಸಿದ್ದಾಳೆ.

ಇದೀಗ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)