ಕೆ.ಆರ್.ಸಾಗರ: ಕೃಷ್ಣರಾಜಸಾಗರ ಅಣೆಕಟ್ಟೆಯ ನೀರಿನ ಮಟ್ಟ ಬುಧವಾರ 120.90 ಅಡಿಗೆ ತಲುಪಿದ್ದು, ಡ್ಯಾಂ ಸಂಪೂರ್ಣ ಭರ್ತಿಯಾಗಲು 3.09 ಅಡಿ ಮಾತ್ರ ಬಾಕಿ ಇದೆ.
ಬೆಳಗ್ಗೆ ಒಳಹರಿವಿನ ಪ್ರಮಾಣ 31 ಸಾವಿರ ಕ್ಯೂಸೆಕ್ ಇತ್ತು. ಸಂಜೆ ವೇಳೆಗೆ 35 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 19 ಗೇಟುಗಳ ಮೂಲಕ 29,636 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಕಾವೇರಿ ಮತ್ತು ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು ಅಣೆಕಟ್ಟೆ ಭದ್ರತೆ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಅಣೆಕಟ್ಟೆ ತುಂಬಲು ಕೇವಲ 3.09 ಅಡಿ ನೀರು ಮಾತ್ರ ಬೇಕಾಗಿದ್ದು, ಇದೇ ಪ್ರಮಾಣದಲ್ಲಿ ಒಳಹರಿವು ಇದ್ದು, ಹೊರಹರಿವು ಕಡಿಮೆ ಮಾಡಿದರೆ ಎರಡು ದಿನಗಳಲ್ಲಿ ಅಣೆಕಟ್ಟೆ ಭರ್ತಿಯಾಗಲಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 44.141 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 87.72 ಅಡಿ, ಒಳಹರಿವು 1,536 ಕ್ಯೂಸೆಕ್, ಹೊರಹರಿವು 985 ಕ್ಯೂಸೆಕ್ ದಾಖಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 33.18 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ.
ಕಾವೇರಿ ನೀರಾವರಿ ನಿಗಮದಲ್ಲಿ ಪ್ರಸ್ತುತ ದಾಖಲೆಗಳ ಪ್ರಕಾರ 1941ರ ಜೂನ್ 21 ರಂದು 121.45 ಅಡಿ ತುಂಬಿದ್ದು ಬಿಟ್ಟರೆ ನಂತರ ಜೂನ್ ತಿಂಗಳಲ್ಲಿ ಕೆ.ಆರ್.ಸಾಗರ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು ಇದೇ ಪ್ರಥಮ. ಜೂನ್ ತಿಂಗಳ ಅಂತ್ಯದಲ್ಲೇ ಮುಖ್ಯಮಂತ್ರಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರೆ ಇದು ಕೂಡ ಹೊಸ ದಾಖಲೆಯಾಗಲಿದೆ.