ಬೆಂಗಳೂರು: ದೆಹಲಿಯಲ್ಲಿ ಹಣ ಕೊಟ್ಟರೆ, ಇಲ್ಲಿ ನಿಮಗೆ ನಗದು ಕೊಡುವುದಾಗಿ ವ್ಯಾಪಾರಿಗೆ ನಂಬಿಸಿ 30 ಲಕ್ಷ ರೂ. ಪಡೆದು ವಂಚಕರು ಮೋಸ ಮಾಡಿದ್ದಾರೆ.
ಜೆ.ಜೆ. ನಗರದ ನಿವಾಸಿ ದಿವ್ಯಾಂಶ್ ಸಂಕ್ಲೇಚ್ ಈ ಕುರಿತು ಸಿಸಿಬಿಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ರಮೇಶ್ ಮತ್ತು ಸುರೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿರಾನಗರದಲ್ಲಿ ಶೂ ಪೀಸ್ ಮತ್ತು ರ್ನೀಚರ್ ಅಂಗಡಿ ಮಾಲೀಕ ದಿವ್ಯಾಂಶ್‌ಗೆ ತಕ್ಷಣ 30 ಲಕ್ಷ ರೂ. ಅಗತ್ಯವಿದ್ದ ಕಾರಣ ದೆಹಲಿಯಲ್ಲಿರುವ ಸಂಬಂಧಿ ಜ್ಯೋತಿಬಾಬು ಬಳಿ ಕೇಳಿದ್ದರು. ಹಣ ಕೊಡಲು ಒಪ್ಪಿದಾಗ ದೆಹಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ತಂದೆಗೆ ಪರಿಚಯವಿದ್ದ ರಮೇಶ್ ಎಂಬಾತನ ಸ್ನೇಹಿತ ಸುರೇಶ್, ವ್ಯಾಪಾರಿಗೆ ಕರೆ ಮಾಡಿ, ದೆಹಲಿಯಲ್ಲಿ ನಿಮ್ಮ ಕಡೆಯವರು ನಮ್ಮ ಹುಡುಗರಿಗೆ 30 ಲಕ್ಷ ರೂ. ಕೊಟ್ಟರೆ, ನಿಮಗೆ ಬೆಂಗಳೂರಲ್ಲಿ ಕೊಡುವುದಾಗಿ ಹೇಳಿದ್ದರು. ಜು. 3ರ ಮಧ್ಯಾಹ್ನ 2 ಗಂಟೆಗೆ ದಿವ್ಯಾಂಶ್‌ಗೆ ಕರೆ ಮಾಡಿದ ಸುರೇಶ್, ಹಣ ಸಿದ್ಧವಾಗಿದೆ. ಮಾರತ್ತಹಳ್ಳಿಗೆ ಬಂದರೆ ಕೊಡುವುದಾಗಿ ಹೇಳಿದ್ದರು. ಅಲ್ಲಿಗೆ ದಿವ್ಯಾಂಶ್ ಕಾರಿನಲ್ಲಿ ಹೋದಾಗ ಇಬ್ಬರು ವ್ಯಕ್ತಿಗಳು ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಕಾರಿನಲ್ಲಿ ಕುಳಿತಿದ್ದರು. ಅದರಲ್ಲೊಬ್ಬ ತಾನು ಸುರೇಶ್ ಎಂದು ಪರಿಚಯಿಸಿಕೊಂಡಿದ್ದ.
ದೆಹಲಿಯಲ್ಲಿ ನಮ್ಮ ಹುಡುಗರು ನಿಮ್ಮ ಸಂಬಂಧಿ ಜ್ಯೋತಿಬಾಬು ಬಳಿಗೆ ಹೋಗಿದ್ದಾರೆ. ಅವರ ಕೈಗೆ ಹಣ ಕೊಡುವಂತೆ ಜ್ಯೋತಿಬಾಬುಗೆ ೆನ್ ಮಾಡಿ ಹೇಳಿ. ಅಲ್ಲಿ ಹಣ ಕೊಟ್ಟರೆ ಇಲ್ಲಿ ನಿಮಗೆ ಹಣ ಕೊಡುವುದಾಗಿ ಕಂತೆ ಕಂತೆ ನೋಟು ತೋರಿಸಿದ್ದರು. ಆ ಪ್ರಕಾರ ದಿವ್ಯಾಂಶ್ ಕರೆ ಮಾಡಿ ಮಾತನಾಡಿದ್ದ. ಆಗ ಆರೋಪಿಗಳು, ಹಣ ಇರುವುದಾಗಿ ಹೇಳಿ ಬ್ಯಾಗ್ ಇಟ್ಟು ಇಳಿದುಹೋಗಿದ್ದರು. ಒಬ್ಬರೇ ಇದ್ದ ಕಾರಣಕ್ಕೆ ದಿವ್ಯಾಂಶ್, ಹಣ ನೋಡಿಕೊಳ್ಳದೆ ನೇರ ಅಂಗಡಿಗೆ ಬಂದು ಬ್ಯಾಗ್ ತೆಗೆದು ನೋಡಿದಾಗ ಬಂಡಲ್‌ನ ಮೇಲಿನ ನೋಟು 500 ರೂ. ಆಗಿದ್ದು, ಒಳಗೆ ಬಿಳಿ ಕಾಗದವಿದ್ದವು. ಸುರೇಶ್‌ಗೆ ದಿವ್ಯಾಂಶ್ ಕರೆ ಮಾಡಿದಾಗ ಸ್ವಿಚ್ ಆ್ ಆಗಿತ್ತು. ಇತ್ತ ದೆಹಲಿಯ ಜ್ಯೋತಿಬಾಬುಗೆ ಕರೆ ಮಾಡಿದರೆ ಹಣ ಕೊಟ್ಟಿರುವುದಾಗಿ ದೃಢಪಡಿಸಿದ್ದರು. ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.