ನ್ಯೂಸ್

Mahakumbh Mela 2025; ಕಾಲ್ತುಳಿತದಲ್ಲಿ 30 ಭಕ್ತರು ಸಾವು, 60 ಜನರಿಗೆ ಗಾಯ

ಪ್ರಯಾಗ್​ರಾಜ್​: ಮಹಾಕುಂಭಮೇಳದಲ್ಲಿ (Mahakumbh Mela) ಇಂದು (ಜನವರಿ 29) ಮುಂಜಾನೆ ಸಂಭವಿಸಿದ ಕಾಲ್ತುಳಿದಲ್ಲಿ 30 ಮಂದಿ ಭಕ್ತಾಧಿಗಳು ಮೃತಪಟ್ಟಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಮಹಾಕುಂಭಮೇಳದ ಡಿಐಜಿ ವೈಭವ್ ಕೃಷ್ಣ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹಾಕುಂಭಮೇಳದ (Mahakumbh Mela) ಡಿಐಜಿ ವೈಭವ್ ಕೃಷ್ಣ, ಪುಣ್ಯಸ್ನಾನದ ವೇಳೆ ಉಂಟಾದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದು, ಇದುವರೆಗೆ 25 ಮಂದಿ ಮೃತರನ್ನು ಗುರುತಿಸಲಾಗಿದೆ. ಉಳಿದ ಐವರ ಗುರುತುಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಈ ಘಟನೆಯಲ್ಲಿ 60 ಭಕ್ತರು ಗಾಯಗೊಂಡಿದ್ದಾರೆ.

ಮಹಾಕುಂಭ ಮೇಳಕ್ಕೆ ಧಾವಿಸಿದ ಭಕ್ತರ ಕುಟುಂಬದವರು ಹೆಲ್ಪ್‌ಲೈನ್ ನಂಬರ್‌ 1920ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಮೌನಿ ಅಮಾವಾಸ್ಯೆಯಾದ್ದರಿಂದ ಮಹಾಕುಂಭ ಮೇಳಕ್ಕೆ ಭಕ್ತರು ಹೆಚ್ಚಾಗಿ ಆಗಮಿಸಿದ್ದರು. ಈ ವೇಳೆ ತ್ರಿವೇಣಿ ಸಂಗಮದ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.

ಮೃತರ ಪೈಕಿ ಕರ್ನಾಟಕದ ನಾಲ್ವರು, ಅಸ್ಸಾಂನ ಒಬ್ಬರು, ಗುಜರಾತ್‌ನ ಒಬ್ಬರು ಇದ್ದಾರೆ. ಕೆಲವು ಗಾಯಗೊಂಡ ಭಕ್ತರನ್ನು ಅವರ ಸಂಬಂಧಿಕರು ಕರೆದೊಯ್ದಿದ್ದಾರೆ. 36 ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ನಿಗಾ ವಹಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಾಕುಂಭಮೇಳದ (Mahakumbh Mela) ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ.