ನ್ಯೂಸ್

ಸರ್ಕಾರಿ ಮಹಿಳಾ ಕಾಲೇಜು, ಪಾಲಿಟೆಕ್ನಿಕ್ ಉನ್ನತೀಕರಣಕ್ಕೆ 30 ಕೋಟಿ ರೂ. ಬಿಡುಗಡೆ: ಯಾವೆಲ್ಲಾ ಕಾಲೇಜುಗಳಿಗೆ ಅನುದಾನ ಲಭ್ಯ?

ಬೆಂಗಳೂರು ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ 30 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳು ಉನ್ನತೀಕರಣಕ್ಕಾಗಿ 30 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯನ್ನು 2024-25ನೇ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ಮಂಡನೆ ಮಾಡಿತ್ತು. ಅದರಂತೆ 21 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಹಾಗೂ 9 ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸೇರಿ ಒಟ್ಟಾರೆ 30 ಕಾಲೇಜುಗಳ ಉನ್ನತೀಕರಣಕ್ಕಾಗಿ ತಲಾ 1 ಕೋಟಿ ರೂ.ಗಳಂತೆ 30 ಕೋಟಿ ರೂ. ಬಿಡುಗಡೆ ಮಾಡಿದೆ. ಇದನ್ನು ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಸೂಚಿಸಿದೆ.

ಬಿಡುಗಡೆ ಮಾಡಿರುವ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವಂತಿಲ್ಲ. ಅನುದಾನ ಲಭ್ಯತೆಯನ್ನು ಪರಿಶೀಲಿಸಿ ನಂತರ ಮುಂದಿನ ಕ್ರಮವಹಿಸುವುದು. ಹೆಚ್ಚುವರಿ ಅನುದಾನವನ್ನು ಒದಗಿಸುವಂತೆ ಕೋರುವಂತಿಲ್ಲ. ಅನುಷ್ಠಾನ ಕುರಿತು ಸಂಪೂರ್ಣ ಯೋಜನಾ ವರದಿಯನ್ನು ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ನಂತರ ಮುಂದಿನ ಕ್ರಮವಹಿಸುವುದು. ನಿರ್ಮಾಣ ಸಂಸ್ಥೆಯು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ವಿಳಂಬವಾದಲ್ಲಿ ದಂಡ ವಿಧಿಸಲಾಗುವುದು ಎಂದು ತಾಂತ್ರಿಕ ಶಿಕ್ಷಣ ಹೊರಡಿಸಿರುವ ಆದೇಶದಲ್ಲಿ ಸೂಚಿಸಿದೆ.