ನ್ಯೂಸ್

1,575 ರೂ. ವಂಚಿಸಿದ್ದಕ್ಕೆ 3 ವರ್ಷ ಜೈಲು

ನೋಯ್ಡಾ: ಮನಿ ಆರ್ಡರ್​ಗಾಗಿ ಸಂದಾಯವಾಗಿದ್ದ 1,575 ರೂಪಾಯಿಯನ್ನು ಪಾವತಿಸದೇ ವಂಚಿಸಿದ್ದ 32 ವರ್ಷ ಹಿಂದಿನ ಪ್ರಕರಣದಲ್ಲಿ ಸಬ್ ಪೋಸ್ಟ್ ಮಾಸ್ಟರ್ ಮಹೇಂದ್ರ ಕುಮಾರ್ ಎಂಬುವವರಿಗೆ 3 ವರ್ಷ ಜೈಲು ಹಾಗೂ 10,000 ರೂಪಾಯಿ ದಂಡ ವಿಧಿಸಿ ನೋಯ್ಡಾದ ಗೌತಮ ಬುದ್ಧ ನಗರ ನ್ಯಾಯಾಲಯ ತೀರ್ಪು ನೀಡಿದೆ. 10,000 ರೂಪಾಯಿ ದಂಡ ಪಾವತಿಸಲು ವಿಫಲವಾದರೆ ಇನ್ನೂ 3 ವರ್ಷ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಆದೇಶ ಪ್ರಕಟಿಸುವ ಮುನ್ನ, ‘ರಾಮ್ ಶಂಕರ್ ಪಟ್ನಾಯಕ್ ವರ್ಸಸ್ ಒಡಿಶಾ ರಾಜ್ಯ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1988ರಲ್ಲಿ ನೀಡಿದ್ದ ತೀರ್ಪನ್ನು ನ್ಯಾಯಾಧೀಶರು ಉಲ್ಲೇಖಿಸಿದರು. ‘ನಂಬಿಕೆ ದ್ರೋಹ ಎಸಗಿದ ವ್ಯಕ್ತಿಯ ಅಪರಾಧ ಸಾಬೀತಾದ ನಂತರ ಆ ಮೊತ್ತವನ್ನು ಹಿಂದಿರುಗಿಸಿದರೆ ಕೃತ್ಯವನ್ನೇ ಮರೆಯಲಾಗದು’ ಎಂದು ಜಡ್ಜ್ ಹೇಳಿದ್ದಾರೆ. 1993 ಅಕ್ಟೋಬರ್​ನಲ್ಲಿ ನೋಯ್ಡಾ ನಿವಾಸಿ ಅರುಣ್ ಮಿಸ್ತ್ರಿ ಎಂಬುವವರು ಬಿಹಾರದಲ್ಲಿರುವ ತಮ್ಮ ತಂದೆಗೆ 1,500 ರೂಪಾಯಿ ಎಂಒ ಮಾಡಿದ್ದು ಅದಕ್ಕೆ 75 ರೂಪಾಯಿ ಕಮಿಷನ್ ಕೂಡ ಪಾವತಿಸಿದ್ದರು. ಆದರೆ, ಆಗ ಸಬ್ ಪೋಸ್ಟ್ ಮಾಸ್ಟರ್ ಆಗಿದ್ದ ಮಹೇಂದ್ರ ಕುಮಾರ್ ಹಣವನ್ನು ಖಜಾನೆಗೆ ಪಾವತಿಸದೇ ವಂಚಿಸಿದ ಪ್ರಕರಣ ಇದಾಗಿದೆ.