ನ್ಯೂಸ್

ದೆಹಲಿಯ 3 ಮಾಲ್, ಒಂದು ಆಸ್ಪತ್ರೆಗೆ ಬಾಂಬ್ ಬೆದರಿಕೆ ಇ-ಮೇಲ್: ಅಧಿಕಾರಿಗಳಿಂದ ವ್ಯಾಪಕ ಶೋಧ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೂರು ಮಾಲ್‌ಗಳು ಮತ್ತು ಆಸ್ಪತ್ರೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಣಕ್ಯಪುರಿಯ ಚಾಣಕ್ಯ ಮಾಲ್, ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್, ವಸಂತ್ ಕುಂಜ್‌ನಲ್ಲಿರುವ ಆಂಬಿಯೆನ್ಸ್ ಮಾಲ್ ಮತ್ತು ಚಾಣಕ್ಯಪುರಿಯಲ್ಲಿರುವ ಪ್ರೈಮಸ್ ಆಸ್ಪತ್ರೆ ಸೇರಿ ಇತರ ಕೆಲವು ಸ್ಥಳಗಳಲ್ಲಿ ಬಾಂಬ್ ಬೆದರಿಕೆಯ ಕುರಿತು ಮಾಹಿತಿ ಪಡೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇ-ಮೇಲ್‌ನಲ್ಲಿ ಬರೆಯಲಾದ ಬೆದರಿಕೆಯು ಕೆಲವೇ ಗಂಟೆಗಳಲ್ಲಿ ಬಾಂಬ್ ಸ್ಫೋಟಗೊಳ್ಳುತ್ತದೆ ಎಂದು ಉಲ್ಲೇಖಿಸಿತ್ತು. ಈ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿ ಅಲ್ಲಿರುವ ಜನರನ್ನು ಸ್ಥಳಾಂತರಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು.

ದೆಹಲಿಯ ಹಲವು ಆಸ್ಪತ್ರೆ ಹಾಗೂ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ನಿರಂತರವಾಗಿ ಬರುತ್ತಲೇ ಇವೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಅಲ್ಲದೆ ಬಹುತೇಕ ಸಂದರ್ಭದಲ್ಲಿ ಹುಸಿ ಬಾಂಬ್ ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.