ಲಖನೌ: ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ಇಂದು ಮಧ್ಯಾಹ್ನ ಕಚ್ಚಾ ಬಾಂಬ್ ಒಂದು ಸ್ಫೋಟಗೊಂಡಿದ್ದು ಮೂರು ವಕೀಲರು ಗಾಯಾಳುಗಳಾಗಿದ್ದಾರೆ. ಮೂರು ಕಚ್ಚಾ ಬಾಂಬ್ಗಳು ಪತ್ತೆಯಾಗಿರುವುದು ವರದಿಯಾಗಿದೆ.
ಎರಡು ವಕೀಲರ ಗುಂಪಿನ ನಡುವೆ ನಡೆಯುತ್ತಿರುವ ಪೈಪೋಟಿಯ ಕಾರಣದಿಂದಾಗಿ ಈ ಬಾಂಬ್ ಸ್ಫೋಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಸ್ಫೋಟಗೊಂಡ ಬಾಂಬ್ ಅಲ್ಲದೆ ಒಟ್ಟು ಮೂರು ಕಚ್ಚಾ ಬಾಂಬ್ಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಇದು ತನ್ನ ಹತ್ಯೆಗೆಂದೇ ಮಾಡಿರುವ ಸ್ಫೋಟ ಎಂದು ಲಖನೌ ಬಾರ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಲೋಧಿ ಆರೋಪಿಸಿದ್ದಾರೆ. 10 ಜನರ ಗುಂಪೊಂದು ತನ್ನ ಚೇಂಬರ್ನ ಬಳಿ ಮೂರು ಬಾಂಬ್ಗಳನ್ನು ಎಸೆದಿದ್ದು ಅದರಲ್ಲಿ ಒಂದು ಮಾತ್ರ ಸ್ಫೋಟಗೊಂಡಿದೆ ಎಂದಿರುವ ಸಂಜೀವ್ ನ್ಯಾಯಾಲಯದ ಆವರಣದಲ್ಲಿ ಭದ್ರತೆಯನ್ನು ಪ್ರಶ್ನಿಸಿದ್ದಾರೆ. ಬಾಂಬ್ ಸ್ಥಳೀಯವಾಗಿ ತಯಾರಿಸಲ್ಪಟ್ಟಿದ್ದು, ಸ್ಫೋಟದಿಂದಾಗಿ ಒಬ್ಬ ವಕೀಲನಿಗೆ ಗಂಭೀರ ಗಾಯವಾಗಿದೆ. ಸಂಜೀವ್ ಸೇರಿದಂತೆ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಜನವರಿ 7ರಂದು ಲಖನೌನ ವಕೀಲ ಶೇಖರ್ ತ್ರಿಪಾಠಿ (32) ಅವರನ್ನು ಐವರು ಕೋಲುಗಳಿಂದ ಹೊಡೆದು ಕೊಂದಿದ್ದರು. ಡಿಸೆಂಬರ್ 17ರಂದು ಬಿಜ್ನೋರ್ನ ಸಿಜೆಎಂ ನ್ಯಾಯಾಲಯದಲ್ಲಿ ಅಪರಿಚಿತ ಹಲ್ಲೆಕೋರರು ಗುಂಡು ಹಾರಿಸಿದ್ದರಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದರು. ಈ ಎಲ್ಲ ಪ್ರಕರಣಗಳಿಂದ ಸಿಟ್ಟಿಗೆದ್ದಿದ್ದ ವಕೀಲರು ತಮ್ಮ ಮೇಲೆ ನಡೆಯುತ್ತಿದ್ದ ದಾಳಿಯನ್ನು ಖಂಡಿಸಿ ಕಳೆದ ತಿಂಗಳು ಪ್ರತಿಭಟನೆಯನ್ನು ನಡೆಸಿದ್ದರು. (ಪಿಟಿಐ)