ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ನಕಲಿ ನೋಟ್ ದಂಧೆಗೆ ಇದೀಗ ಅದಕ್ಕೆ ಬ್ರೇಕ್ ಬಿದ್ದಿದ್ದು ಬಿಹಾರದಿಂದ ನಕಲಿ ನೋಟ್ ತಂದು ಬೆಂಗಳೂರಿನಲ್ಲಿ ಮಾರಟ ಮಾಡುತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಶರವಣ ಎಂದು ಗುರುತಿಸಲಾಗಿದ್ದು ಇನ್ಸ್ಟಾಗ್ರಾಮ್ ಮೂಲಕ ಗ್ರಾಹಕರಿಗೆ ಗಾಳ ಹಾಕಿ ಕೃತ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ಈತ ಇನ್ಸ್ಟಾಗ್ರಾಂನಲ್ಲಿ ಫೇಕ್ನೋಟ್ ಎಂದು ಐಡಿ ಕ್ರಿಯೇಟ್ ಮಾಡಿ ನಕಲಿ ನೋಟುಗಳನ್ನು ಮಾರಾಟ ಮಾಡುತ್ತಿದ್ದ.
ಎಲ್ಲಾ ವ್ಯವಹಾರವನ್ನೂ ಇನ್ಸ್ಟಾಗ್ರಾಮ್ ಮೂಲಕವೇ ವ್ಯವಹರಿಸುತಿದ್ದ ಆರೋಪಿ ಬಿಹಾರದ ಮೂಲಕ ನಕಲಿ ನೋಟು ತರುತಿದ್ದ. ಈತ ಬಿಹಾರಕ್ಕೆ ತೆರಳಿ 10 ಲಕ್ಷ ನೋಟಿಗೆ 3ಲಕ್ಷ ರೂ. ಅಸಲಿ ನೋಟು ನೀಡಿ ತಂದು ಬಳಿಕ ಬೆಂಗಳೂರಿನಲ್ಲಿ 4 ಲಕ್ಷ ರೂ. ಅಸಲಿ ನೋಟಿಗೆ 10 ಲಕ್ಷ ರೂ.ಯ ನಕಲಿ ನೋಟು ನೀಡುತಿದ್ದ.
ಸದ್ಯ ಈತನಿಂದ ನಕಲಿ ನೋಟು ಪಡೆದ ಮತ್ತಿಬ್ಬರು ಕೇರಳ ಮೂಲದ ಆರೋಪಿಗಳನ್ನೂ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ. 6 ಲಕ್ಷಕ್ಕೂ ಅಧಿಕ ನಕಲಿ ನೋಟ್ ವಶಕ್ಕೆ ಪಡೆಯಲಾಗಿದೆ.