ನ್ಯೂಸ್

ನ.5ರಂದು 3 ಎಕ್ಸಾಮ್ಸ್, ದಿನಾಂಕ ಬದಲಿಸುವಂತೆ ಸಿಎಂಗೆ ಖರ್ಗೆ ಪತ್ರ

ಬೆಂಗಳೂರು: ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ನ.5ರಂದು ನಡೆಯಲಿರುವ ವಿವಿಧ ಲಿಖಿತ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕದಂದು ನಿಗದಿ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ.

ನ.5ರಂದು ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್ಸಿ) ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ 242 ಹುದ್ದೆಗಳಿಗೆ ಮತ್ತು ಸಹಕಾರ ಸಂಘಗಳ ನಿಬಂಧಕರ ಕಚೇರಿ ನಿರೀಕ್ಷಕರ 47 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಇದೇ ದಿನ ಐಬಿಪಿಎಸ್ ಪರೀಕ್ಷೆ ಮತ್ತು 454 ಸಿವಿಲ್ ಕಾನ್‌ಸ್ಟೆಬಲ್ ನೇಮಕಾತಿಗೂ ಲಿಖಿತ ಪರೀಕ್ಷೆ ನಿಗದಿಯಾಗಿದೆ. ಈ ಬಗ್ಗೆ ‘ವಿಜಯವಾಣಿ’ ವಿಸ್ತೃತ ವರದಿ ಪ್ರಕಟ ಮಾಡಿ ಗಮನ ಸೆಳೆದಿತ್ತು.

ಇದಕ್ಕೆ ಸ್ಪಂದಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂಗೆ ಪತ್ರ ಬರೆದಿದ್ದು, ಕಳೆದ 5 ವರ್ಷದಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯದೆ ಸಾವಿರಾರು ಅಭ್ಯರ್ಥಿಗಳು ವಿದ್ಯಾರ್ಹತೆಗೆ ಮತ್ತು ವಯೋಮಿತಿಗೆ ತಕ್ಕಂತೆ ಸರಿಯಾದ ಉದ್ಯೋಗ ಸಿಗದೆ ಅನ್ಯಾಯಕ್ಕೆ ಒಳಗಾಗಿದ್ದಾರೆ.

ಅಲ್ಲದೆ, ನೇಮಕಾತಿಗೆ ಅರ್ಜಿ ಸಲ್ಲಿಸಿದ ಯುವಕ-ಯುವತಿಯರು ವರ್ಷಗಟ್ಟಲೇ ತಯಾರಿ ನಡೆಸುತ್ತಾರೆ. ಆದರೆ, ಒಂದೇ ದಿನ ಮೂರು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿ ಆಗಿರುವುದರಿಂದ ಗೊಂದಲ ಉಂಟಾಗಿದ್ದು, ಇದರಿಂದ ಹಲವು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗುತ್ತಾರೆ. ಆದ್ದರಿಂದ ಕೆಪಿಎಸ್‌ಸಿ ಪರೀಕ್ಷೆಗಳನ್ನು ಬೇರೆ ದಿನಾಂಕಗಳಲ್ಲಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.