ನ್ಯೂಸ್

3.5 ಎಕರೆ ಬಾಳೆ ಬೆಳೆ ನಾಶ ಮಾಡಿದ ರೈತ: ಮಾರುಕಟ್ಟೆಯಲ್ಲಿ ಬೆಲೆ ಕುಸಿತ, ಮತ್ತಷ್ಟು ಖರ್ಚು, ಶ್ರಮ ವ್ಯರ್ಥವೆಂದು ಈ ನಿರ್ಧಾರ

ಚನ್ನಪಟ್ಟಣ : ಲಾಕ್‌ಡೌನ್‌ನಿಂದಾಗಿ ಏಲಕ್ಕಿ ಬಾಳೆಹಣ್ಣಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಹತಾಶೆಯಿಂದ ರೈತರೊಬ್ಬರು ಟ್ರ್ಯಾಕ್ಟರ್ ಹರಿಸಿ ಫಸಲಿಗೆ ಬಂದಿದ್ದ ಮೂರುವರೆ ಎಕರೆ ಬಾಳೆತೋಟವನ್ನು ಶನಿವಾರ ನಾಶಪಡಿಸಿದ್ದಾರೆ.

ತಾಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ರೈತ ನಾಗರಾಜು ಮತ್ತವರ ಮಗ ಸಿದ್ದೇಶ್ ಸ್ವಂತ ಹಾಗೂ ಭೋಗ್ಯ ಪಡೆದಿದ್ದ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು. ಈಗಾಗಲೇ ಸುಮಾರು 4 ಲಕ್ಷ ರೂ.ವರೆಗೂ ಖರ್ಚು ಮಾಡಿದ್ದರು. ಬೆಳೆಯೂ ಉತ್ತಮವಾಗಿ ಬಂದಿತ್ತು. ಆದರೆ, ಸೂಕ್ತ ಬೆಲೆ ಸಿಗುತ್ತಿಲ್ಲ ಹಾಗೂ ಮುಂದೆಯೂ ಸಿಗುವ ಲಕ್ಷಣಗಳಿಲ್ಲ ಎಂಬ ಕಾರಣಕ್ಕಾಗಿ ಸಂಪೂರ್ಣ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದಾರೆ.

ಈಗಾಗಲೇ ಲಕ್ಷಾಂತರ ಹಣ ಖರ್ಚಾಗಿದ್ದು, ಇನ್ನು 1 ಲಕ್ಷ ರೂ. ಖರ್ಚು ಮಾಡಬೇಕಿತ್ತು. ಆದರೆ, ಮಾರುಕಟ್ಟೆಯಲ್ಲಿ ಬಾಳೆ ಬೆಲೆ ಕುಸಿದಿದ್ದು, ಖರ್ಚು, ಶ್ರಮ ಎರಡೂ ವ್ಯರ್ಥ ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ನಾಗರಾಜು ತಿಳಿಸಿದ್ದಾರೆ.

ರೈತರ ಚಿಂತಾಜನಕ ಸ್ಥಿತಿ : ಈ ಸಂಬಂಧ ಪತ್ರಿಕೆಗೆ ತಿಳಿಸಿರುವ ನಾಗರಾಜು ಪುತ್ರ ಸಿದ್ದೇಶ್, ಏಲಕ್ಕಿ ಬಾಳೆ ಕೆ.ಜಿ.ಗೆ 15ರಿಂದ 20 ರೂ. ಮಾರಾಟವಾಗುತ್ತಿದೆ. ಹೆಚ್ಚಿನ ಶುಭ ಸಮಾರಂಭಗಳೂ, ಹೋಟೆಲ್‌ಗಳೂ ನಡೆಯುತ್ತಿಲ್ಲವಾದ ಕಾರಣ ಬಾಳೆ ಎಲೆಗೂ ಮಾರುಕಟ್ಟೆ ಇಲ್ಲ.

ಈ ಎಲ್ಲ ಕಾರಣಗಳಿಂದ ಬೆಳೆ ಬೆಳೆಯಲು ಮಾಡಿದ್ದ ಖರ್ಚು ಕೂಡ ಬರುವುದಿಲ್ಲ. ಹಾಗಾಗಿ ಈ ನಿರ್ಧಾರ ಕೈಗೊಂಡೆವು. ಲಾಕ್‌ಡೌನ್‌ನಿಂದ ರೈತರ ಬದುಕು ದುಸ್ತರವಾಗಿದೆ. ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ದೊರಕುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸದಿದ್ದರೆ ರೈತರ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.