ನ್ಯೂಸ್

ಬೆಂಗಳೂರು ಟರ್ಫ್ ಕ್ಲಬ್ ಮೇಲೆ ಸಿಸಿಬಿ ದಾಳಿ: ೩.೪೫ ಕೋಟಿ ರೂ.ಜಪ್ತಿ ೬೬ ಮಂದಿ ವಶ

ಬೆಂಗಳೂರು : ರೇಸ್‌ಕೋಸ್ ರಸ್ತೆಯಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು, ೬೬ ಮಂದಿಯನ್ನು ವಶಕ್ಕೆ ಪಡೆದು, ೩.೪೫ ಕೋಟಿ ರೂ. ನಗದು, ೫೫ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.


ದಾಳಿಯ ವೇಳೆ ತಲೆಮರೆಸಿಕೊಂಡಿರುವ ೯ ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಅಧಿಕೃತ ಪರವಾನಗಿ ಇಲ್ಲದೇ ಅಕ್ರಮವಾಗಿ ಹಣ ಸಂಪಾದನೆ ದುರುದ್ದೇಶದಿಂದ ಕೆಲವರು, ಟರ್ಫ್ ಕ್ಲಬ್ ಪರವಾಗಿರುವ ಅಧಿಕೃತ ಬುಕ್ಕಿಗಳೆಂದು ಹೇಳಿಕೊಂಡು ರೇಸ್ ಬೆಟ್ಟಿಂಗ್ ನಡೆಸುತ್ತಿದ್ದರು. ಅಲ್ಲದೇ ಪರವಾನಗಿ ಪಡೆದ ಏಜೆಂಟ್‌ಗಳು ಸರ್ಕಾರದ ಆದೇಶಗಳನ್ನು ಸ್ಟಾಲ್‌ಗಳಲ್ಲಿ ಪ್ರಕಟಿಸದೆ, ಸರಿಯಾದ ಲೆಕ್ಕ ನಿರ್ವಹಣೆ ಮಾಡದೇ, ಸಾರ್ವಜನಿಕರಿಂದ ಪಡೆದುಕೊಂಡ ಹಣಕ್ಕೆ ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ. ಜತೆಗೆ ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದರು. ಅದರಿಂದ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದರು. ಈ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.