ನ್ಯೂಸ್

3.35 ಲಕ್ಷ ಬಿಪಿಎಲ್ ಕಾರ್ಡ್​ಗಳು ಎಪಿಎಲ್​ಗೆ ಪರಿವರ್ತನೆ

ಬಿಪಿಎಲ್ ಪಡಿತರ ಚೀಟಿ ಗೊಂದಲ, ಪರಿಷತ್​ನಲ್ಲಿ ಪಕ್ಷಾತೀತ ಕಳವಳ | 3 ತಿಂಗಳಲ್ಲಿ ಸರಿಪಡಿಸುವೆ ಎಂದ ಸಚಿವ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿದಾರರ ಪೈಕಿ ಅನರ್ಹರೆಂದು ಗುರುತಿಸಿದವರ ಕಾರ್ಡ್​ಗಳು ರದ್ದು, ನಂತರ ವಾಪಸ್, ಅನರ್ಹ ಬಿಪಿಎಲ್ ಕಾರ್ಡ್​ದಾರರು ಎಪಿಎಲ್​ಗೆ ಪರಿವರ್ತನೆ ಇತ್ಯಾದಿ ಗೊಂದಲಗಳು ವಿಧಾನ ಪರಿಷತ್​ನಲ್ಲಿ ಸೋಮವಾರ ಪ್ರತಿಧ್ವನಿಸಿ, ಪಕ್ಷಾತೀತವಾಗಿ ಕಳವಳ ವ್ಯಕ್ತವಾಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪವಾದ ವಿಷಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಉತ್ತರಿಸಿ, ಮೂರು ತಿಂಗಳೊಳಗೆ ಬಿಪಿಎಲ್ ಪಡಿತರ ಚೀಟಿದಾರರ ಅನರ್ಹ, ಅರ್ಹವೆಂಬ ಗೊಂದಲ ಸರಿಪಡಿಸಿ, ಹತ್ತಾರು ವರ್ಷಗಳ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸಿದ್ಧವಾಗಿರುವೆ. ಇದಕ್ಕೆ ಪಕ್ಷಾತೀತವಾದ ಸಹಕಾರ ಕೂಡ ಮುಖ್ಯ ಎಂದರು.

ಬಿಪಿಎಲ್ ಪಡಿತರ ಚೀಟಿದಾರರ ಪರಿಷ್ಕರಿಸಿ ಅನರ್ಹರನ್ನು ಎಪಿಎಲ್​ಗೆ ಪರಿವರ್ತಿಸುವ ಕೆಲಸಕ್ಕೆ ಕೈಹಾಕಿದ್ದೆವು. ಈ ಪ್ರಯತ್ನದಲ್ಲಿ ಒಂದೆರಡು ಲೋಪಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮಾಧ್ಯಮಗಳ ಮುಂದೆ ಹೋದರೆ, ಜನರ ಮಧ್ಯೆಯೂ ಆತಂಕ ಶುರುವಾಯಿತು. ಇದರಿಂದಾಗಿ ಪ್ರಕ್ರಿಯೆ ಸ್ಥಗಿತ ಮಾಡಲಾಗಿದೆ ಎಂಬ ಸಮಜಾಯಿಷಿ ನೀಡಿದರು. ಪ್ರತಿಕ್ರಿಯೆಗೆ ತೃಪ್ತರಾಗದ ಬಿಜೆಪಿಯ ಎನ್.ರವಿಕುಮಾರ್, ಸಿ.ಟಿ.ರವಿ, ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿದ್ಧವಾಗಿದ್ದರೆ ಭಯ, ಹಿಂಜರಿಕೆ ಏಕೆ? ರಾಜ್ಯದ ಒಟ್ಟು 6.50 ಕೋಟಿ ಜನಸಂಖ್ಯೆಯಲ್ಲಿ 5.29 ಕೋಟಿ ಪಡಿತರ ಫಲಾನುಭವಿಗಳಿದ್ದಾರೆ.

ಅಂದರೆ ಶೇ.80 ಬಡವರಿದ್ದಾರೆ ಎಂದ ಮೇಲೆ ಸಮೃದ್ಧ ಕರ್ನಾಟಕವೆಂದು ಕರೆಯಲು ಸಾಧ್ಯವೇ? ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿ ಕಳ್ಳಸಾಗಣೆ ತಡೆಗೆ ಕ್ರಮಕೈಗೊಳ್ಳಬೇಕು. ಅನರ್ಹರಿಗೆ ಪಡಿತರ ಚೀಟಿ ವಿತರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಬಿಪಿಎಲ್ ಪಡಿತರ ಚೀಟಿ ವಿತರಣೆಯ ಮಾನದಂಡಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರೆ, ಜೆಡಿಎಸ್​ನ ಟಿ.ಎ.ಶರವಣ ಧ್ವನಿಗೂಡಿಸಿದರು. ಆದಾಯ ತೆರಿಗೆ, ವಿದ್ಯುತ್ ಬಳಕೆ ಪ್ರಮಾಣದ ಸ್ಪಷ್ಟೀಕರಣ ಅಗತ್ಯವೆಂದು ಐವನ್ ಡಿಸೋಜ ಕೋರಿದರೆ, ಜೆಡಿಎಸ್​ನ ಕೆ.ಎ. ತಿಪ್ಪೇಸ್ವಾಮಿ ಅವರು ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ರದ್ದು ಮಾಡಿದ್ದರ ಬಗ್ಗೆ ತಿಳಿಯ ಬಯಸಿದರು.

ಕಾರ್ಡ್ ಹೆಚ್ಚಲು ಎಲ್ಲರೂ ಕಾರಣ

ಸಚಿವ ಮುನಿಯಪ್ಪ ಉತ್ತರ ಮುಂದುವರಿಸಿ, ಒಟ್ಟು 1.28 ಲಕ್ಷ ಬಿಪಿಎಲ್ ಪಡಿತರ ಚೀಟಿಯುಳ್ಳ ಫಲಾನುಭವಿಗಳ ಸಂಖ್ಯೆ 4.42 ಕೋಟಿ, 25.25 ಲಕ್ಷ ಎಪಿಎಲ್ ಪಡಿತರ ಹೊಂದಿದ 86.45 ಲಕ್ಷ ಫಲಾನುಭವಿಗಳು ಸೇರಿದರೆ 5.29 ಕೋಟಿ ಜನರು ಈ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ ಪಡಿತರ ಫಲಾನುಭವಿಗಳ ಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಶೇ.50 ಮೀರಿಲ್ಲ. ಕರ್ನಾಟಕದಲ್ಲಿ ಶೇ.70ರ ಮೇಲ್ಪಟ್ಟಿದ್ದು, ಈ ಪರಿಸ್ಥಿತಿಗೆ ಎಲ್ಲ ಸರ್ಕಾರಗಳೂ ಹೊಣೆಯಾಗಿವೆ ಎಂದರು.

ರಾಜ್ಯಾದ್ಯಂತ 2021ರಿಂದ 2023ರ ಮೇವರೆಗೆ ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆಯಲ್ಲಿ 3.35 ಲಕ್ಷ ಅನರ್ಹರನ್ನು ಎಪಿಎಲ್​ಗೆ ಪರಿವರ್ತಿಸಿ, 13.51 ಕೋಟಿ ರೂ. ದಂಡ ವಿಧಿಸಲಾಗಿದೆ. ಪರಿಷ್ಕರಣೆ ಮುಂದುವರಿಯಲಿದ್ದು, ಇನ್ನೂ ಶೇ.20 ಅನರ್ಹರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅನುಮಾನವಿದೆ. ಅಂತಹವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಸರ್ಕಾರ ಬದ್ಧ ಎಂದರು.

ಕೇಂದ್ರದ ಸೂಚನೆಯಂತೆ ಸ್ಥಗಿತ

ರಾಜ್ಯದಲ್ಲಿ 25 ಲಕ್ಷ ಎಪಿಎಲ್ ಪಡಿತರ ಚೀಟಿದಾರ ರಿದ್ದು, ಇದರಲ್ಲಿ ಒಂದು ಲಕ್ಷ ಕಾರ್ಡ್​ದಾರರು ಮಾತ್ರ ಪಡಿತರ ಖರೀದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಸ್ಥಗಿತಗೊಳಿಸಲಾಗಿದೆ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು. ಕಾಲಕಾಲಕ್ಕೆ ತಪಾಸಣೆ, ಮಿಂಚಿನ ದಾಳಿ ನಡೆಸಿ ಅಕ್ರಮ ದಾಸ್ತಾನು, ಕಾಳಸಂತೆಗೆ ಮಾರಾಟ ಪತ್ತೆ ಹಚ್ಚುವಲ್ಲಿ ಇಲಾಖೆ ಹಿಂದೆ ಬಿದ್ದಿಲ್ಲ. ಅಕ್ರಮ ದಾಸ್ತಾನು ಮುಟ್ಟುಗೋಲು, ವಿಲೇ ಮಾಡಿದ ಪಡಿತರ ಮೊತ್ತ ಸರ್ಕಾರಕ್ಕೆ ಜಮಾ ಮಾಡಲಾಗುತ್ತಿದೆ. 2024-25ರಲ್ಲಿ 213 ಎಫ್​ಐಆರ್​ಗಳನ್ನು ದಾಖಲಿಸಿ 2.68 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಆರೋಪಿಗಳನ್ನು ಬಂಧಿಸಲಾಗಿದೆ. ಪರಿಶೀಲನೆಯ ಮೇಲ್ವಿಚಾರಣೆಗೆ ವಿಭಾಗವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಚಿವ ಮುನಿಯಪ್ಪ ವಿವರಿಸಿದರು.