ಬೆಂಗಳೂರು: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷಾ ಫಲಿತಾಂಶದಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪದವಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲೇ ಪ್ರವೇಶ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
ಪೂರಕ ಪರೀಕ್ಷೆ 2ರಲ್ಲಿ ಉತ್ತಿರ್ಣರಾಗಿರುವವರಿಗೆ ಸೆ.13ರಿಂದ ಮುಂದಿನ ಹತ್ತು ದಿನಗಳ ಕಾಲ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ.
ಈ ಸಂಬಂಧ ಕಾಲೇಜುಗಳು ತಮ್ಮ ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿ ಪ್ರಕಟಿಸಬೇಕು. ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ವೆಬ್‌ಸೈಟ್ ಮುಖಾಂತರ ಪ್ರವೇಶ ಪಡೆಯಲು ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲವಾಗುವಂತೆ ಕಾಲೇಜಿನ ಕಂಪ್ಯೂಟರ್ ಲ್ಯಾಬ್‌ಗಳನ್ನು ಬಳಸಿಕೊಳ್ಳಬೇಕು ಎಂದು ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.