ನ್ಯೂಸ್

ಶಾಲೆಗಳನ್ನು ಮುಚ್ಚಿದ್ದರಿಂದ 29.34 ಲಕ್ಷ ಕೋಟಿ ರೂ. ನಷ್ಟ!

ನವದೆಹಲಿ: ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿಂದ ಶಾಲೆಗಳನ್ನು ಮುಚ್ಚಿರುವುದರಿಂದಾಗಿ ದೇಶದ ಭವಿಷ್ಯದ ಆದಾಯದಲ್ಲಿ ಸುಮಾರು 400 ಬಿಲಿಯನ್ ಡಾಲರ್ (29.34 ಲಕ್ಷ ಕೋಟಿ ರೂ.) ನಷ್ಟ ಉಂಟಾಗಲಿದೆ ಎಂದು ವಿಶ್ವಬ್ಯಾಂಕ್​ನ ವರದಿಯೊಂದು ಹೇಳಿದೆ. ಸದ್ಯದ ಪರಿಸ್ಥಿತಿ ಲೆಕ್ಕಾಚಾರದ ಪ್ರಕಾರ ದಕ್ಷಿಣ ಏಷ್ಯಾ ಭಾಗದ ರಾಷ್ಟ್ರಗಳಿಗೆ ಒಟ್ಟು 622 (-ಠಿ;45.63 ಲಕ್ಷ ಕೋಟಿ) ಬಿಲಿಯನ್ ಡಾಲರ್ ನಷ್ಟವಾಗಬಹುದು. ಬಿಕ್ಕಟ್ಟಿನ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋದರೆ ನಷ್ಟದ ಪ್ರಮಾಣ 880 ಬಿಲಿಯನ್ ಡಾಲರ್​ಗೆ (-ಠಿ;64.57 ಲಕ್ಷ ಕೋಟಿ) ಏರಿಕೆಯಾಗುವ ಸಾಧ್ಯತೆ ಇದೆ. ಹೆಚ್ಚಿನ ನಷ್ಟ ಭಾರತದಲ್ಲೇ ಸಂಭವಿಸಲಿದೆ. ಎಲ್ಲ ರಾಷ್ಟ್ರಗಳೂ ತಮ್ಮ ಜಿಡಿಪಿ ಬಹುಪಾಲನ್ನು ಈ ಕಾರಣದಿಂದ ಕಳೆದುಕೊಳ್ಳಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕರೊನಾ ಬಿಕ್ಕಟ್ಟು ದಕ್ಷಿಣ ಏಷ್ಯಾ ಭಾಗದ ಶಾಲೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಸುಮಾರು 39 ಕೋಟಿ ಮಕ್ಕಳು ಸದ್ಯ ಶಾಲೆಯಿಂದ ಹೊರಗುಳಿದಿದ್ದಾರೆ. ಸುಮಾರು 55 ಲಕ್ಷ ಮಕ್ಕಳು ಶಾಲೆ ಬಿಡುವ ಸಾಧ್ಯತೆ ಇದ್ದು, ಇದು ಒಂದು ಪೀಳಿಗೆಯ ಉತ್ಪಾದಕತೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. 5 ತಿಂಗಳಿಗೂ ಹೆಚ್ಚು ಕಾಲ ಮಕ್ಕಳು ಶಾಲೆಗಳಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಹೊಸ ವಿಷಯಗಳ ಕಲಿಕೆಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.