ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಸೆ.28ರಂದು ಗ್ರಾಮೀಣ ದಸರಾ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಎಸ್.ಸಂತೋಷ್ ತಿಳಿಸಿದರು.
ತಾಲೂಕು ಮಟ್ಟದ ಗ್ರಾಮೀಣ ದಸರಾ ಆಚರಣೆ ಸಂಬಂಧ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಅಂಗವಾಗಿ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.
ತಾಲೂಕು ಮಟ್ಟದಲ್ಲಿ 1 ಮತ್ತು 2ನೇ ಬಹುಮಾನ ಪಡೆದವರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ವಿಜೇತರಿಗೆ ಸೆ.28ರಂದು ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಆಯೋಜಿಸಿರುವ ಗ್ರಾಮೀಣ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಸೆ.23ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪುರುಷರಿಗೆ ಪಟ್ಟಣದ ಶ್ರೀ ಕೃಷ್ಣರಾಜೇಂದ್ರ ತಾಲೂಕು ಕ್ರೀಡಾಂಗಣ ಹಾಗೂ ಮಹಿಳೆಯರಿಗಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕ್ರೀಡಾಕೂಟ ನಡೆಯಲಿದೆ. ಪುರುಷರಿಗೆ ಕೆಸರುಗದ್ದೆ (ಹಂಪಾಪುರ ಗ್ರಾಮ), ಗೊಬ್ಬರ ಮೂಟೆ ಹೊತ್ತು ಓಡುವುದು, ಮೂರು ಕಾಲಿನ ಓಟ, ಗೋಣಿ ಚೀಲದ ಒಳಗೆ ಕಾಲು ಇಟ್ಟು ಓಡುವುದು, ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವುದು, ಗೋಣಿಚೀಲದ ಒಳಗೆ ಕಾಲು ಇಟ್ಟು ಓಡುವುದು, ಒಂಟಿ ಕಾಲಿನ ಓಟ, ಕೆಸರುಗದ್ದೆ ಓಟ(ಹಂಪಾಪುರ ಗ್ರಾಮದಲ್ಲಿ) ನಡೆಯಲಿದೆ ಎಂದು ವಿವರಿಸಿದರು.
ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವವರು ಸೆ.22 ರೊಳಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಶಿಕ್ಷಕ ಬಿ.ಆರ್.ಮಂಜುನಾಥ್ ಮೊ.9900962976 ಅವರಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಕೋರಿದರು.
ಸಭೆಯಲ್ಲಿ ತಾಪಂ ಇಒ ಎಚ್.ಕೆ.ಸತೀಶ್, ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಟಿಎಸ್‌ಡಬ್ಲ್ಯೂ ಎಸ್.ಎಂ.ಅಶೋಕ್‌ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್.ಗುರುಪ್ರಸಾದ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಮಹೇಶ್ ಇದ್ದರು.