ನ್ಯೂಸ್

ಆಸ್ತಿ ಕಲಹ: ಅಣ್ಣನ ಕುಟುಂಬದ ಮೇಲೆಯೇ ಕಾರು ಹರಿಸಿದ ತಮ್ಮ! ವಿಡಿಯೋ ವೈರಲ್​... Land Dispute

Land Dispute : ಹುಟ್ಟುತ್ತಾ ಅಣ್ಣ ತಮ್ಮ ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿನಂತೆ ಇಲ್ಲಿ ಆಸ್ತಿಯ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಕಲಹ ಉಂಟಾಗಿ ಕೋಪಗೊಂಡ ತಮ್ಮ, ಅಣ್ಣನ ಕುಟುಂಬದ ಮೇಲೆ ಕಾರು ಹರಿಸಿರುವ ಘಟನೆ ಪಂಜಾಬ್​ನ ಗಟ್ಟಿ ಜಟ್ಟ ಗ್ರಾಮದಲ್ಲಿ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ಕೃತ್ಯದಲ್ಲಿ ಮೂವರಿಗೆ ಗಂಭೀರಗಾಯವಾಗಿದ್ದು, ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದೇ ವೇಳೆ ಆರೋಪಿ ದಿಲ್​ಬಾಗ್​ ಸಿಂಗ್​ ನಾಪತ್ತೆಯಾಗಿದ್ದು, ಆತನಿಗೆ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಹಾಗು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿವಾದ ಸೃಷ್ಟಿಸಿದ ಆಸ್ತಿ ವಿಚಾರ

ಗಟ್ಟಿ ಜಟ್ಟ ಹಳ್ಳಿಯ ನಿವಾಸಿಯಾದ ಸುರ್ಜಿತ್ ಸಿಂಗ್​ ಮೂರು ಮಕ್ಕಳನ್ನು ಹೊಂದಿದ್ದಾರೆ. ಸುರ್ಜಿತ್​ ತಮ್ಮ ಪತ್ನಿಯ ಜತೆ ಕಿರಿಯ ಮಗನಾದ ದಿಲ್ಬಾಗ್ ಸಿಂಗ್​ ಮನೆಯಲ್ಲಿ ಮೊದಲು ವಾಸವಿದ್ದರು. ಆದರೆ, ಈತ ಆಸ್ತಿ ವಿಚಾರಕ್ಕೆ ಒಂದು ತಿಂಗಳ ಹಿಂದೆ ಗಲಾಟೆ ಮಾಡಿ, ವೃದ್ಧ ದಂಪತಿಯನ್ನು ಮನೆಯಿಂದ ಆಚೆ ಹಾಕಿದನು. ತದನಂತರ ದಂಪತಿ ತಮ್ಮ ಹಿರಿಯ ಮಗನಾದ ಬಲ್ವಿಂದರ್ ಸಿಂಗ್​ನೊಂದಿಗೆ ವಾಸವಿದ್ದರು.

ಮೊದಲೇ ತಂದೆ ತಾಯಿ ಮೇಲೆ ಕೋಪಗೊಂಡಿದ್ದ ದಿಲ್ಬಾಗ್ ಸಿಂಗ್​, ತನ್ನ ಹೆತ್ತವರಿಗೆ ಆಶ್ರಯ ನೀಡಿದ್ದಾನೆ ಎಂದು ಅಣ್ಣನ ಮೇಲೂ ಕುಪಿತಗೊಂಡಿದ್ದ. ಜುಲೈ 14ರಂದು ಬಲ್ವಿಂದರ್ ಸಿಂಗ್ ತನ್ನ ಕುಟುಂಬದೊಂದಿಗೆ ಮನೆಯ ಗೇಟ್‌ನಲ್ಲಿ ನಿಂತಿದ್ದಾಗ ಅದೇ ವೇಳೆ ದಿಲ್ಬಾಗ್ ಸಿಂಗ್ ತನ್ನ ಹೆಂಡತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದನು. ಈ ವೇಳೆ ಕುಟುಂಬದ ಸದಸ್ಯರು ಒಟ್ಟಿಗೆ ಇರುವುದನ್ನು ನೋಡಿದ ಈತ ತನ್ನ ಹೆಂಡತಿಯನ್ನು ಕಾರಿನಿಂದ ಕೆಳಗೆ ಇಳಿಸಿ, ನಂತರ ಆ ಕುಟುಂಬದ ಮೇಲೆ ವೇಗವಾಗಿ ಕಾರು ಚಲಾಯಿಸಿದ್ದಾನೆ.

ಹತ್ತಿರದ ಆಸ್ಪತ್ರೆಗೆ ಗಾಯಾಳುಗಳು ರವಾನೆ

ಈ ಅಪಘಾತದಲ್ಲಿ ಬಲ್ವಿಂದರ್ ಸಿಂಗ್ ಕುಟುಂಬಕ್ಕೆ ಗಂಭೀರ ಗಾಯವಾಗಿದ್ದು, ಗದ್ದಲ ಕೇಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಹತ್ತಿರದ ಮೊಗ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆ ಗಾಯಾಳು ಬಲ್ವಿಂದರ್ ಸಿಂಗ್​ ಮಾತನಾಡಿ, ಈ ಹಿಂದೆ ದಿಲ್ಬಾಗ್​ ಸಿಂಗ್ ಅನೇಕ ಬಾರಿ ಬೆದರಿಕೆ ಹಾಕುತ್ತಿದ್ದ, ಹಾಗೆಯೇ ಈ ಅಪಘಾತದಲ್ಲಿ ನನ್ನ ಹೆಂಡತಿ ಹಾಗೂ ಮಗಳು ಕಾರಿನ ಕೆಳಗೆ ಸಿಲುಕಿಕೊಂಡಿದ್ದರು. ಅಕ್ಕ ಪಕ್ಕದಲ್ಲಿ ಯಾರೂ ಬರದೇ ಇದ್ದಿದ್ದರೆ ನಾವು ಮೂವರು ಬದುಕುತ್ತಿರಲ್ಲ ಎಂದು ಹೇಳಿದ್ದಾರೆ.

ಪೊಲೀಸರಿಂದ ಕಾನೂನು ಕ್ರಮ

ನಾವು ಬೆಳೆಸಿದ ಮಗ ನಮ್ಮನ್ನು ಮನೆಯಿಂದ ಹೊರಗೆ ಹಾಕಿದನು. ಈಗ ಅವನು ನನ್ನ ಹಿರಿಯ ಮಗನ ಜೀವ ತೆಗೆಯಲು ಹೊರಟಿದ್ದಾನೆ. ನಮಗೆ ನ್ಯಾಯ ಬೇಕು ಎಂದು ಬಲ್ವಿಂದರ್ ತಂದೆ ಸುರ್ಜಿತ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಈ ಪ್ರಕರಣದ ಬಗ್ಗೆ ಡಿಎಸ್ಪಿ ರಮಣದೀಪ್ ಸಿಂಗ್ ಮಾತನಾಡಿ, ಈ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ, ಸಿಸಿಟಿವಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಹಾಗೆಯೇ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಭರವಸೆ ನೀಡಿದರು. (ಏಜೆನ್ಸೀಸ್​)