ನ್ಯೂಸ್

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್; 28 ಮಂದಿ ಸಾವು, 20ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ನವದೆಹಲಿ: ಚಾಲಕನ ನಿಯಂತ್ರಣ ತಪ್ಪಿ ಬಸ್​ ಒಂದು ಕಂದಕಕ್ಕೆ ಉರುಳಿದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 28 ಮಂದಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಟೇಷನ್​ ಹೌಸ್​ ಅಧಿಕಾರಿಯೊಬ್ಬರು, ಟರ್ಬತ್‌ನಿಂದ ಕ್ವೆಟ್ಟಾಗೆ ತೆರಳುತ್ತಿದ್ದ ಬಸ್ ಬಲೂಚಿಸ್ತಾನ್ ಪ್ರಾಂತ್ಯದ ವಾಶುಕ್​ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಚಲಿಸುತ್ತಿದ್ದ ವೇಳೆ ಬಸ್​ ಟೈರ್​ ಸ್ಫೋಟಗೊಂಡ ಪರಿಣಾಮ ದುರ್ಘಟನೆ ಸಂಭವಿಸಿದ ಎಂದು ತಿಳಿದು ಬಂದಿದೆ.

ಅತಿವೇಗ ಹಾಗೂ ಅಜಾಗರೂಕ ಚಾಲನೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದ್ದು, ಅಪಘಾತದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 28 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಏಂದು ಸ್ಟೇಷನ್​ ಹೌಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.