ನ್ಯೂಸ್

27 ರಂದು ನಳಂದ ಬುದ್ಧ ವಿಹಾರದ ನೂತನ ಕಟ್ಟಡ ಉದ್ಘಾಟನೆ

ತಿ.ನರಸೀಪುರ : ತಾಲೂಕಿನ ಕೂಡ್ಲೂರು ಗ್ರಾಮದ ಬಳಿ ಅ.27ರಂದು ಬೆಳಗ್ಗೆ 11.30 ಗಂಟೆಗೆ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮಾಣಗೊಂಡಿರುವ ನಳಂದ ಬುದ್ಧ ವಿಹಾರದ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ನಡೆಯಲಿದೆ.

ಗೌತಮ ಬುದ್ಧ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಹಮ್ಮಿಕೊಂಡಿರುವ ಲೋಕಾರ್ಪಣೆ ಸಮಾರಂಭದ ಬಿಜಾಪುರ ಒನ್ ಡ್ರಾಪ್ ಝೆನ್ ಬುದ್ಧ ವಿಹಾರದ ಭದಂತ ಬೋಧಿದಮ್ಮ ಝೆನ್ ಮಾಸ್ತರ್ ಸಾನ್ನಿಧ್ಯದಲ್ಲಿ, ಭಂತೆ ಮನೋರಕ್ಖಿತ ಸೇರಿದಂತೆ ಬೌದ್ಧ ಬಿಕ್ಕುಗಳ ಸಾನ್ನಿಧ್ಯ ವಹಿಸಲಿದ್ದು, ಸಿಎಂ ಸಿದ್ದರಾಮಯ್ಯ ಘನ ಉಪಸ್ಥಿತಿಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನೂತನ ಕಟ್ಟಡವನ್ನು ಉದ್ಘಾಟಿಸುವರು.

ಸಂಸದ ಸುನೀಲ್ ಬೋಸ್ ಬುದ್ಧ ಮತ್ತು ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದು, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ದೀಪ ನಮನ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಪುಷ್ಪನಮನ ಸಲ್ಲಿಸುವರು. ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಪೂಜ್ಯ ಭಿಕ್ಕು ಸಂಘಕ್ಕೆ ಚೀವರ ದಾನ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ, ದಮ್ಮ ಧ್ವಜಾರೋಹಣವನ್ನು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿ.ಪಂ. ಮಾಜಿ ಸದಸ್ಯೆ ಶಶಿಕಲಾ ನಾಗರಾಜು ಹಾಗೂ ಇನ್ನಿತರ ಹಲವು ಗಣ್ಯರು ಭಾಗವಹಿಸುವರು.

ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ 9 ಗಂಟೆಗೆ ತಾಲೂಕು ಕಚೇರಿ ಮುಂಭಾಗ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, 9.30 ರಿಂದ 10.30 ರವರೆಗೆ ದಮ್ಮ ರ‌್ಯಾಲಿ, 10.45ಕ್ಕೆ ಧ್ವಜಾರೋಹಣ ಮತ್ತು ಬಿಕ್ಕು ಸಂಘಕ್ಕೆ ಭೋಜನ ದಾನ, 11 ಗಂಟೆಗೆ ಲೋಕಾರ್ಪಣೆ ಪೂರ್ವದ ಭಿಕ್ಕುಗಳಿಂದ ಬುದ್ಧವಂದನ ಹಾಗೂ 11.30ಕ್ಕೆ ಆರ್. ಧ್ರುವನಾರಾಯಣ ವೇದಿಕೆಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.