ಅಗರ್ತಲ: ಲವರ್ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪದ ಮೇಲೆ 27 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ತ್ರಿಪುರಾ ರಾಜಧಾನಿ ಅಗರ್ತಲದ 50 ಕಿ.ಮೀ ದೂರದಲ್ಲಿರುವ ಖೋವೈ ಜಿಲ್ಲೆಯ ಬೆಲ್ಛೆರ್ರಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಸಂಬಂಧವನ್ನು ಮುಂದುವರಿಸಲು ಒಪ್ಪದ ಲವರ್ ಮೇಲೆ ಮಹಿಳೆ ಕಳೆದ ವಾರ ಆಸಿಡ್ ದಾಳಿ ಮಾಡಿದ್ದಳು. ಆರೋಪಿಯನ್ನು ಬೀನಾ ಶಾಂತಲ್ ಎಂದು ಗುರುತಿಸಲಾಗಿದ್ದು, ಆಕೆಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಆರೋಪಿ ಬೀನಾ, 30 ವರ್ಷದ ಸೋಮೆನ್ ಶಾಂತಲ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ. 2010ರಲ್ಲಿ ಮನೆ ಬಿಟ್ಟು ಓಡಿ ಬಂದ ಜೋಡಿ ಪುಣೆಯಲ್ಲಿ ಕಳೆದ 9 ವರ್ಷದಿಂದ ಲಿವ್ ಇನ್ ರಿಲೇಶನ್ನಲ್ಲಿದ್ದರಂತೆ. ಇಬ್ಬರು ಸಹ ತ್ರಿಪುರದಲ್ಲಿ ನೆರೆಹೊರೆಯವರಾಗಿದ್ದರು.
ಪುಣೆಯಲ್ಲಿ ಇರುವಾಗ ಬೀನಾ ಗೃಹಿಣಿಯಾಗಿ, ಬಿಡುವಿನ ಸಮಯದಲ್ಲಿ ಇತರೆ ಕೆಲಸ ಮಾಡಿಕೊಂಡು ಸೋಮೆನ್ ಓದಿಗೆ ನೆರವಾಗುತ್ತಿದ್ದಳು. ಕಾಲೇಜಿನಲ್ಲಿ ಓದು ಮುಗಿದಾಗ ಸೋಮೆನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಈ ನಡುವೆ 2019ರಲ್ಲಿ ತ್ರಿಪುರಾಗೆ ಹಿಂದಿರುಗಿದ ಬಳಿಕ ಬೀನಾಳೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದ. ಆತನಿಗಾಗಿ ಸಾಕಷ್ಟು ಹುಡುಕಾಡಿ ತುಂಬಾ ಬೀನಾ ತುಂಬಾ ನೋವು ಅನುಭಿವಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅನೇಕ ದಿನಗಳ ಬಳಿಕ ಅ. 19ರಂದು ಖೋವೈನಲ್ಲಿ ಸೋಮೆನ್, ಬೀನಾ ಕಣ್ಣಿಗೆ ಬಿದ್ದಿದ್ದ. ಈ ವೇಳೆ ಮಾತನಾಡಿಸಲು ಪ್ರಯತ್ನಿಸಿದ್ದಾಳೆ. ಆದರೆ, ಆತ ಮಾತನಾಡಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಬೀನಾ, ಸೋಮೆನ್ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮೆನ್ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗೋವಿಂದ್ ಬಲ್ಲಭ್ ಪಂತ್ (ಜಿಬಿಪಿ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಸಂತ್ರಸ್ತನ ಕುಟುಂಬ ಖೋವೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ಸೈಯದ್ ಉದ್ದೀನ್ ತಿಳಿಸಿದ್ದಾರೆ. (ಏಜೆನ್ಸೀಸ್)