ಶೃಂಗೇರಿಯಲ್ಲಿ ಡಾ. ವಿ.ಆರ್.ಗೌರೀಶಂಕರ್ ಅಭಿನಂದನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಜಿ.ಎಂ.ಸತೀಶ್, ಬಿ.ಕೆ.ರವಿ, ಅಂಬಲಮನೆ ಸುಬ್ರಹ್ಮಣ್ಯ, ಬಿ.ಎಲ್.ರವಿಕುಮಾರ್ ಇದ್ದರು. 
ನ್ಯೂಸ್

27ಕ್ಕೆ ಡಾ. ಗೌರೀಶಂಕರ್‌ಗೆ ನಾಗರಿಕ ಸನ್ಮಾನ

ಶೃಂಗೇರಿ: ಪಪಂ ಸಭಾಂಗಣದಲ್ಲಿ ಫೆ.27ರಂದು ಸಂಜೆ 4.30ಕ್ಕೆ ಶೃಂಗೇರಿ ಶ್ರೀ ಮಠದ ಮುಖ್ಯಸಲಹೆಗಾರ ಡಾ. ವಿ.ಆರ್.ಗೌರೀಶಂಕರ್ ಅವರಿಗೆ ನಾಗರಿಕ ಅಭಿನಂದನೆ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಜಿ.ಎಂ.ಸತೀಶ್ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ಪೀಠದಲ್ಲಿ 38 ವರ್ಷಗಳ ಕಾಲ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ವಿ.ಆರ್.ಗೌರೀಶಂಕರ್ ಅವರ ಗುರುಭಕ್ತಿ, ಸಾಮಾಜಿಕ ಕಳಕಳಿ ಅನುಪಮ ಎಂದು ಬಣ್ಣಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿ, ಸಂಘ ಸಂಸ್ಥೆಗಳಿಗೆ, ಶಾಲೆಗಳಿಗೆ, ಜನಸಾಮಾನ್ಯರಿಗೆ ಅವರು ನೀಡಿದ ಕೊಡುಗೆ ಅಪಾರ. ಶೃಂಗೇರಿ ಪ್ರಸ್ತುತ ಸುಪ್ರಸಿದ್ಧ ಪ್ರವಾಸಿತಾಣವಾಗಿ ಪ್ರಸಿದ್ಧವಾಗಿದೆ. ಇಲ್ಲಿರುವ ಅಂಗಡಿ ಮುಂಗಟ್ಟುಗಳ ಅಭಿವೃದ್ಧಿಗೆ ಪರೋಕ್ಷವಾಗಿ ಕಾರಣಕರ್ತರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಅಮ್ಮ ೌಂಡೇಶನ್ ಸಂಸ್ಥಾಪಕ ಸುಧಾಕರ ಶೆಟ್ಟಿ ಭಾಗವಹಿಸುವರು. ಡಾ. ವಿ.ಆರ್.ಗೌರೀಶಂಕರ್ ಅವರನ್ನು ಗೌರವಿಸಲು ಕ್ಷೇತ್ರದ ಸಂಘ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದವರಿಂದ ನೃತ್ಯ ವೈಭವ ಸಾಂಸ್ಕೃತಿಕ ಸಮಾರಂಭ ನೆರವೇರಲಿದೆ ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ಬಿ.ಕೆ.ರವಿ, ಕೋಶಾಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ, ಪದಾಧಿಕಾರಿ ಬಿ.ಎಲ್.ರವಿಕುಮಾರ್ ಇದ್ದರು.