ಮಂಗಳೂರು: ಮಂಗಳೂರಿನಿಂದ ಉಮ್ರಾ ಯಾತ್ರೆಗೆ ತೆರಳಿದ್ದ 35 ಮಂದಿಯ ತಂಡ ಖರ್ಚಿಗಾಗಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ 26,432 ಸೌದಿ ರಿಯಾಲ್ ಕರೆನ್ಸಿ ( ಸುಮಾರು 5.88 ಲಕ್ಷ ರೂ.ಭಾರತೀಯ ಮೌಲ್ಯ) ವಿಮಾನ ನಿಲ್ದಾಣದಲ್ಲಿ ಕಳುವಾಗಿರುವ ಕುರಿತಂತೆ ಬಜಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನಿಂದ ಸೌದಿಯ ಜೆಡ್ಡಾ ತಲುಪುವಷ್ಟರಲ್ಲಿ ಅವರ ಬ್ಯಾಗಿನಿಂದ ಯಾರೋ ಕಳವುಗೈದಿದ್ದಾರೆ ತಂಡದ ಮುಖ್ಯಸ್ಥ ಅಹ್ಮದ್ ಇಕ್ಬಾಲ್ ಎಂಬವರ ಪತ್ನಿ ಬಜ್ಪೆ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಟ್ರಾವೆಲ್ ಏಜನ್ಸಿ ಹೊಂದಿರುವ ಅಹ್ಮದ್ ಇಕ್ಬಾಲ್ ಎಂಬವರು, ಇತರ 35 ಮಂದಿಯ ಜೊತೆಗೆ ಹಜ್ ಯಾತ್ರೆ ಕೈಗೊಂಡಿದ್ದು. ಎ. 30ರಂದು ಮಂಗಳೂರಿನಿಂದ ಮುಂಬಯಿ ಮೂಲಕ ತೆರಳುವ ವಿಮಾನದಲ್ಲಿ ಜೆಡ್ಡಾಕ್ಕೆ ತೆರಳಿದ್ದಾರೆ. ಈ ವೇಳೆ ತಂಡದ ಸದಸ್ಯ ಮಹಮ್ಮದ್ ಬದ್ರುದ್ದೀನ್ ಅವರಲ್ಲಿದ್ದ ಬ್ಯಾಗಿನಲ್ಲಿಯೇ ಎಲ್ಲ ಹಣ ಇಟ್ಟುಕೊಂಡಿದ್ದರು.
ಮೇ 1ರಂದು ಜೆದ್ದಾ ತಲುಪಿತ್ತು. ಆದರೆ ಅಲ್ಲಿ ತಲುಪಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಹಣ ಇದ್ದ ಬ್ಯಾಗಿನ ಜಿಪ್ ಅನ್ನು ಕಟ್ ಮಾಡಿ ಕರೆನ್ಸಿ ಕಳವು ಮಾಡಲಾಗಿತ್ತು. ಲಾಕ್ ಒಡೆದು ಹಾಕಿದ್ದು ಒಳಗಿದ್ದ 26,432 ಸೌದಿ ರಿಯಾಲ್ ಕರೆನ್ಸಿಯನ್ನು ಕಳವು ಮಾಡಿರುವುದು ಕಂಡುಬಂದಿದೆ. ಇಕ್ಬಾಲ್ ಮತ್ತು ತಂಡವು ಮೇ 13ರಂದು ಹಿಂತಿರುಗಲು ಟಿಕೆಟ್ ಆಗಿದೆ. ನಗರ ಅಪರಾಧ ವಿಭಾಗದ ಡಿಸಿಪಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವಿಮಾನ ನಿಲ್ದಾಣದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದ್ದು ಯಾವುದೇ ಸುಳಿವು ಸಿಕ್ಕಿಲ್ಲ. ಪ್ರವಾಸಿ ತಂಡವು ಮಂಗಳೂರಿನಿಂದ ಮುಂಬಯಿ, ಜೆಡ್ಡಾ ತಲುಪಿದ ಬಳಿಕ ಕಳವಾಗಿರುವುದನ್ನು ನೋಡಿದೆ. ಹೀಗಾಗಿ ಈ ನಡುವಲ್ಲಿ ಯಾವುದೇ ಕಡೆ ಕಳವು ಆಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ