ಸಿಂಧನೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಷರದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಘಟಕ ಮಂಗಳವಾರ ತಾಪಂ ಎಡಿ ಅಮರಗುಂಡಪ್ಪಗೆ ಮನವಿ ಸಲ್ಲಿಸಿತು.
ಕೇಂದ್ರ ಸರ್ಕಾರ 2010ರಿಂದ ಗೌರವಧನ ಹೆಚ್ಚಳ ಮಾಡಿಲ್ಲ. ಆದ್ದರಿಂದ ಈಗ ಕನಿಷ್ಠ 26 ಸಾವಿರ ರೂ. ವೇತನ ನೀಡಬೇಕು. ಅಲ್ಲಿವರೆಗೆ ಕೇರಳ, ಪಾಂಡಿಚೇರಿ, ತಮಿಳುನಾಡು ಮತ್ತು ಹರಿಯಾಣ ರಾಜ್ಯಗಳಲ್ಲಿರುವಂತೆ 7 ಸಾವಿರದಿಂದ 12 ಸಾವಿರ ರೂ.ವರೆಗೆ ಗೌರವಧನ ನೀಡಬೇಕು.
ಈಗಾಗಲೇ ಹಣಕಾಸು ಇಲಾಖೆ ಒಪ್ಪಿಕೊಂಡಿರುವಂತೆ ನಿವೃತ್ತ ನೌಕರರಿಗೆ ಇಡುಗಂಟು ನೀಡಬೇಕು. ಸಾದಿಲ್ವಾರು ಜಂಟಿ ಖಾತೆಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ. ಮೊದಲಿನಂತೆ ಖಾತೆ ಬದಲಿಸಬೇಕು. ಅಗತ್ಯ ಇರುವೆಡೆ ಸುಸಜ್ಜಿತ ಅಡುಗೆ ಮನೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಶೇಕ್ಷಾಖಾದ್ರಿ, ಜಿಲ್ಲಾಧ್ಯಕ್ಷೆ ರೇಣುಕಮ್ಮ ಕೆ., ತಾಲೂಕಾಧ್ಯಕ್ಷೆ ವಿಶಾಲಾಕ್ಷಿ, ಶರಣಮ್ಮ ಪಾಟೀಲ್, ರೇಣುಕಮ್ಮ ಕಣ್ಣೂರು, ದೇವಮ್ಮ ಜಾಲಿಹಾಳ, ಹುಸೇನ್‌ಬೀ ತುರ್ವಿಹಾಳ, ಸರಸ್ವತಿ ಮುಳ್ಳೂರು ಇದ್ದರು.