ನ್ಯೂಸ್

ಮಹಾರಾಷ್ಟ್ರದಲ್ಲಿ 26 ನಕ್ಸಲರ ಹತ್ಯೆ, ಭೀಮಾ- ಕೋರೆಗಾಂವ್ ಆರೋಪಿ ಸಾವು?

ನಾಗ್ಪುರ/ಮುಂಬೈ: ಮಹಾರಾಷ್ಟ್ರದ ಗಢ್​ಚಿರೋಲಿಯಲ್ಲಿ ಪೊಲೀಸ್ ಕಮಾಂಡೋಗಳೊಂದಿಗೆ ಶನಿವಾರ ಮುಂಜಾನೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಕನಿಷ್ಠ 26 ಮಾವೋವಾದಿ ಉಗ್ರರು ಬಲಿಯಾಗಿದ್ದಾರೆ. ಗಢಚಿರೋಲಿ ಪೊಲೀಸ್​ನ ಸಿ-60 ಕಮಾಂಡೋಗಳು ಛತ್ತೀಸ್​ಗಢ-ಗಢ್​ಚಿರೋಲಿ ಗಡಿಯ ಕೋಟ್ಗಲ್-ಗ್ಯಾರಪತ್ತಿ ಅರಣ್ಯ ಪ್ರದೇಶದಲ್ಲಿ ಉಗ್ರರ ಶೋಧಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಶನಿವಾರ ಮುಂಜಾನೆ ನಕ್ಸಲೀಯರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಿದಾಗ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 26 ನಕ್ಸಲ್ ಉಗ್ರಗಾಮಿಗಳು ಮೃತಪಟ್ಟರು. 10ಕ್ಕೂ ಅಧಿಕ ನಕ್ಸಲರು, 4 ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಮುಂಜಾನೆ 6.30ರ ವೇಳೆ ಗುಂಡಿನ ಚಕಮಕಿ ಆರಂಭವಾಯಿತು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಂಕಿತ್ ಗೋಯಲ್ ತಿಳಿಸಿದ್ದಾರೆ.

ಮಿಲಿಂದ್ ತೇಲ್ತುಂಬ್ಡೆ ಸಾವು?: ಎನ್​ಕೌಂಟರ್​ನಲ್ಲಿ ಬಲಿಯಾದ ನಕ್ಸಲರಲ್ಲಿ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಮಿಲಿಂದ್ ತೇಲ್ತುಂಬ್ಡೆ ಕೂಡ ಸೇರಿದ್ದಾರೆಂದು ಮೂಲಗಳು ತಿಳಿಸಿವೆ. ಮಿಲಿಂದ್ ಪ್ರಖ್ಯಾತ ಚಿಂತಕ ಆನಂದ್ ತೇಲ್ತುಂಬಡೆಯವರ ಸೋದರ. ಸಿಪಿಐ (ಮಾವೋವಾದಿ) ಪಕ್ಷದ ಕೇಂದ್ರ ಸಮಿತಿಯ ಸದಸ್ಯ ಮಿಲಿಂದ್, ರಾಷ್ಟ್ರೀಯ ತನಿಖಾ ಸಂಸ್ಥೆಗೂ (ಎನ್​ಐಎ) ಬೇಕಾಗಿದ್ದ ನಕ್ಸಲನಾಗಿದ್ದ.

ಮರ್ಡಿಂತೋಲಾ ಅರಣ್ಯದಲ್ಲಿ ಕಾರ್ಯಾಚರಣೆ: ಮರ್ಡಿಂತೋಲಾ ಅರಣ್ಯ ಪ್ರದೇಶದ ಕೊರ್ಚಿಯಲ್ಲಿ ಪೊಲೀಸ್ ಕಮಾಂಡೋಗಳು ಮತ್ತು ನಕ್ಸಲರ ನಡುವೆ ಕಾಳಗ ನಡೆಯಿತು. ಎನ್​ಕೌಂಟರ್ ಸ್ಥಳದಿಂದ ಕಮಾಂಡೋಗಳು ಹಲವು ಶಸ್ತ್ರಾಸ್ತ್ರ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಎಸ್​ಪಿ ಸೌಮ್ಯಾ ಮುಂಡೆ ನೇತೃತ್ವದಲ್ಲಿ ನಕ್ಸಲ ಶೋಧ ಕಾರ್ಯ ನಡೆಯುತ್ತಿದ್ದ ವೇಳೆ ಎನ್​ಕೌಂಟರ್ ನಡೆದಿದೆ. ಅರಣ್ಯದಿಂದ ನಕ್ಸಲರ ಒಟ್ಟು 26 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ. ಮೃತ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಸತ್ತವರಲ್ಲಿ ಒಬ್ಬ ಉನ್ನತ ನಾಯಕ ಕೂಡ ಇದ್ದಾನೆ ಎಂದು ಹೇಳಲಾಗಿದೆ. ಉಗ್ರಗಾಮಿಗಳು ಹತರಾದ ತಮ್ಮ ಕಾರ್ಯಕರ್ತರ ಶವಗಳನ್ನು ಹೊತ್ತುಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

ಜಾರ್ಖಂಡ್​ನಲ್ಲಿ ನಕ್ಸಲ್ ನಾಯಕನ ಸೆರೆ: ನಕ್ಸಲ್ ಉನ್ನತ ನಾಯಕನೊಬ್ಬನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಸಿಪಿಐ (ಮಾವೋವಾದಿ) ಪಕ್ಷದ ಪಾಲಿಟ್​ಬ್ಯೂರೋ ಸದಸ್ಯ ಕಿಶನ್ ದಾ ಆಲಿಯಾಸ್ ಪ್ರಶಾಂತ್ ಬೋಸ್ ಹಾಗೂ ಆತನ ಪತ್ನಿ ಶೀಲಾ ಮರಂಡಿಯನ್ನು ಸೆರೈಕೇಲಾ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ. ಬೋಸ್ ಬಂಧನಕ್ಕೆ ನೆರವಾದವರಿಗೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. 75 ವರ್ಷದ ಬೋಸ್ ಪ್ರಮುಖ ನಕ್ಸಲೀಯ ಸಿದ್ಧಾಂತಿಗಳಲ್ಲಿ ಒಬ್ಬನಾಗಿದ್ದು ಪಕ್ಷದ ಎರಡನೇ ಪ್ರಮುಖ ನಾಯಕನಾಗಿದ್ದಾನೆ. ಭಾರತೀಯ ಮಾವೋವಾದಿ ಕಮ್ಯೂನಿಸ್ಟ್ ಕೇಂದ್ರವು (ಎಂಸಿಸಿಐ) ಸಿಪಿಐ-ಎಂಎಲ್ (ಪೀಪಲ್ಸ್ ವಾರ್) ಪಕ್ಷದಲ್ಲಿ ವಿಲೀನಗೊಳ್ಳುವ ಮುನ್ನ ಎಂಸಿಸಿಐನ ಮುಖ್ಯಸ್ಥನಾಗಿದ್ದ. ಕಿಶನ್ ದಾ, ಬಂಗಾಳದ ಜಾಧವ್​ಪುರ ಪ್ರದೇಶದವರಾಗಿದ್ದಾರೆ. ನಿರ್ಭಯ್, ಕಿಶನ್, ಕಾಜಲ್ ಮತ್ತು ಮಹೇಶ್ ಮೊದಲಾದ ಗುಪ್ತ ಹೆಸರುಗಳಿಂದಲೂ ಬೋಸ್ ಕಾರ್ಯ ನಿರ್ವಹಿಸುತ್ತಿದ್ದ. ಈಶಾನ್ಯ ರಾಜ್ಯಗಳು, ಝಾರ್ಖಂಡ್, ಬಂಗಾಳ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕ್ರಾಂತಿಕಾರಿ ಚಳವಳಿಯ ಸಮನ್ವಯಕಾರನಾಗಿದ್ದಾರೆ.