ನವದೆಹಲಿ: ದೇಶದಲ್ಲಿ ಕರೊನಾ ತಾಂಡವ ತೀವ್ರಗೊಂಡಿದ್ದು, ಇನ್ನೂರು ದಿನಗಳಲ್ಲಿ 26 ಲಕ್ಷ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಬಿಹಾರ, ತೆಲಂಗಾಣ ಮತ್ತು ಗುಜರಾತ್ ರಾಜ್ಯಗಳಲ್ಲೇ ಅತಿ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಈ ರಾಜ್ಯಗಳಲ್ಲಿ ಸಾವಿನ ಸಂಖ್ಯೆಯೂ ಅಧಿಕವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ತಾಸಿನಲ್ಲಿ ಪ್ರತಿ ಮೂರು ನಿಮಿಷಕ್ಕೆ ಇಬ್ಬರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಆದಾಗ್ಯೂ ಗುಣಮುಖರ ಪ್ರಮಾಣ ಅಧಿಕವಾಗಿರುವುದರಿಂದ ಪರಿಸ್ಥಿತಿ ಹತೋಟಿಯಲ್ಲಿದೆ. ಚೇತರಿಕೆ ಪ್ರಮಾಣ ಶೇ.72.51ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಮರಣ ಪ್ರಮಾಣ ಶೇ.1.92ಕ್ಕೆ ಇಳಿಕೆಯಾಗಿದೆ.
ಕಳೆದ 24 ತಾಸಿನಲ್ಲಿ ಹೊಸದಾಗಿ 21 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 26.68 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 242 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 51,200ಕ್ಕಿಂತ ಅಧಿಕವಾಗಿದೆ. ಹೊಸದಾಗಿ 21 ಸಾವಿರ ರೋಗಿಗಳು ಗುಣಮುಖರಾಗುವುದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 19.39 ಲಕ್ಷಕ್ಕೆ ಏರಿಕೆಯಾಗಿದೆ. 6.76 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಟಿಎಂಸಿ ಶಾಸಕ ಮರಣ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ ಶಾಸಕ ಸಮರೇಶ್ ದಾಸ್ (76) ಸೋಮವಾರ ನಿಧನರಾಗಿದ್ದಾರೆ. ಕರೊನಾ ಸೋಂಕಿನ ಜತೆಗೆ ಅವರಿಗೆ ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.
3 ಕೋಟಿ ಮಾದರಿ ಪರೀಕ್ಷೆ: ಭಾರತದಲ್ಲಿ ಈವರೆಗೆ 3 ಕೋಟಿಗೂ ಅಧಿಕ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ. ಆ. 16ರವರೆಗೆ ಒಟ್ಟು 3,00,41,400 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 7,31,697 ಮಾದರಿಗಳನ್ನು ಭಾನುವಾರ ಒಂದೇ ದಿನ ಪರೀಕ್ಷಿಸಲಾಗಿದೆ. ದೇಶದಲ್ಲಿ 1,470 ಲ್ಯಾಬ್ಗಳಲ್ಲಿ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ 969 ಸರ್ಕಾರಿ ಲ್ಯಾಬ್ಗಳಾಗಿದ್ದು, 501 ಖಾಸಗಿ ಲ್ಯಾಬ್ಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ವೆಂಟಿಲೇಟರ್ನಲ್ಲಿಯೇ ಚಿಕಿತ್ಸೆ ಮುಂದುವರಿಕೆ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್) ಮುಂದುವರಿಸಲಾಗಿದೆ ಎಂದು ದೆಹಲಿಯ ಸೇನಾ ರೆಫರಲ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಆ.10ರಂದು ಪ್ರಣಬ್ ಮುಖರ್ಜಿ ಅವರಿಗೆ ಕರೊನಾ ಪಾಸಿಟಿವ್ ತೋರಿಸಿತ್ತು. ಮಿದುಳಿನ ಶಸ್ತ್ರಚಿಕಿತ್ಸೆಗೂ ಅವರು ಒಳಗಾಗಿದ್ದಾರೆ.
ಎಸ್ಪಿಬಿ ಆರೋಗ್ಯಕ್ಕೆ ರಜನಿಕಾಂತ್ ಹಾರೈಕೆ: ಕರೊನಾ ಸೋಂಕಿಗೆ ಒಳಗಾಗಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಆದಷ್ಟು ಬೇಗ ಸುಧಾರಣೆಯಾಗಲಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹಾರೈಸಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ರಜನಿಕಾಂತ್, ಎಸ್ಪಿಬಿ ಆರೋಗ್ಯ ಅಪಾಯದಿಂದ ಹೊರ ಬಂದಿದ್ದಾರೆ ಎಂದು ಕೇಳಿ ಸಂತೋಷವಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಎಸ್ಪಿಬಿ ಚೆನ್ನೈನ ಎಂಜಿಎಂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.