ನ್ಯೂಸ್

26/11 ದಾಳಿ: ಕರಾಳ ದಿನ ಆಚರಣೆ

kumarvrl

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರದ ಮೇಲೆ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕರ ದಾಳಿಯನ್ನು ಮುಂಬೈ ಮತ್ತು ದೇಶದ ವಿವಿಧೆಡೆ ಕರಾಳ ದಿನವನ್ನಾಗಿ ಆಚರಿಸಲಾಯಿತು ಹಾಗೂ ಹುತಾತ್ಮ ಪೊಲೀಸ್ ಅಧಿಕಾರಿಗಳನ್ನು ಸ್ಮರಿಸಲಾಯಿತು. ಖ್ಯಾತ ಉದ್ಯಮಿ ರತನ್ ಟಾಟಾ ಹೃದಯರ್ಸ³ ಟಿಪ್ಪಣಿಯನ್ನು ಹಂಚಿಕೊಂಡಿದ್ದು, ದಾಳಿಯ ಪ್ರಮುಖ ಟಾರ್ಗೆಟ್​ಗಳಲ್ಲಿ ಒಂದಾದ ತಾಜ್ ಹೋಟೆಲ್​ನ ಚಿತ್ರವನ್ನು ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಹೇಯ ವಿನಾಶವನ್ನು ಎಂದಿಗೂ ಮರೆಯಲಾಗದು ಎಂದಿದ್ದಾರೆ.

12 ವರ್ಷಗಳ ಹಿಂದಿನ ಆ ಭಯೋತ್ಪಾದನೆ ಮತ್ತು ವಿನಾಶವನ್ನು ಪರಾಜಯಗೊಳಿಸಲು ಮುಂಬೈ ಜನತೆ ತೋರಿದ ಒಗ್ಗಟ್ಟು ಶ್ಲಾಘನೀಯ ಎಂದು ಟಾಟಾ ಭಾವುಕವಾಗಿ ಹೇಳಿದ್ದಾರೆ. ಮೃತಪಟ್ಟ ಜನರಿಗೆ ಇಂದು ನಾವು ಶ್ರದ್ಧಾಂಜಲಿ ಸಲ್ಲಿಸಬಹುದು ಮತ್ತು ಶತ್ರು ಮೇಲೆ ಜಯ ಸಾಧಿಸಲು ನೆರವಾದ ವೀರರನ್ನು ಗೌರವಿಸಬಹುದು. ಆದರೆ, ಅಂದು ತೋರಿದ ಒಗ್ಗಟ್ಟು ಮತ್ತು ಸಹಾನುಭೂತಿಯ ಕೃತ್ಯಗಳು ಸದಾ ಸ್ಮರಣೀಯವಾಗಿರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿವಿಧೆಡೆ ನಡೆದ ದಾಳಿಯಲ್ಲಿ ಒಟ್ಟು 166 ಜನರು ಮೃತಪಟ್ಟಿದ್ದು ತಾಜ್ ಹೋಟೆಲ್​ನಲ್ಲಿ 31 ಮಂದಿ ಅಸುನೀಗಿದ್ದರು. ದಾಳಿ ನಡೆದ ಕೆಲ ತಿಂಗಳ ನಂತರ ಹೋಟೆಲ್​ಅನ್ನು ಪುನಶ್ಚೇತನಗೊಳಿಸಲಾಗಿತ್ತು.

ಹಫೀಜ್ ಜೈಲಿಂದ ಹೊರಗೆ: ಮುಂಬೈ ದಾಳಿಯ ಪ್ರಮುಖ ಸಂಚುಕೋರ ಹಾಗೂ ಲಷ್ಕರ್ -ಎ -ತಯ್ಬ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನದ ಜೈಲಿನಲ್ಲಿ ಇಲ್ಲ. ಲಾಹೋರ್​ನ ತನ್ನ ಮನೆಯಲ್ಲಿದ್ದಾನೆಂದು ಭಾರತದ ಗುಪ್ತಚರ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಎರಡು ಪ್ರಕರಣಗಳಲ್ಲಿ ಸಯೀದ್​ಗೆ 10 ವರ್ಷಕ್ಕೂ ಹೆಚ್ಚಿನ ಕಾಲ ಸೆರೆವಾಸ ವಿಧಿಸಲಾಗಿದೆ.

ಮುಂಬೈ ದಾಳಿಗಳಿಂದ ಉಂಟಾದ ಗಾಯವನ್ನು ಭಾರತ ಎಂದೂ ಮರೆಯಲ್ಲ. ದೇಶ ಈಗ ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಪ್ರಾಣತೆತ್ತ ಎಲ್ಲರಿಗೂ, ಉಗ್ರರ ವಿರುದ್ಧ ಸೆಣಸಾಡಿದ ಪೊಲೀಸರಿಗೆ ನಮಿಸುವೆ. | ನರೇಂದ್ರ ಮೋದಿ ಪ್ರಧಾನಿ

ಕಾಶ್ಮೀರದಲ್ಲಿ 3 ಯೋಧರು ಹುತಾತ್ಮ

ಶ್ರೀನಗರ: ಮುಂಬೈ ದಾಳಿಯ 12ನೇ ವರ್ಷಾಚರಣೆಯ ಕರಾಳ ದಿನದಂದೇ ಜಮ್ಮು ಕಾಶ್ಮೀರದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಶ್ರೀನಗರದ ಹೊರವಲಯದಲ್ಲಿ ಉಗ್ರರು ನಡೆಸಿದ ದಾಳಿಗೆ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಸೇನೆಯ ರಸ್ತೆ ಉದ್ಘಾಟನೆ ಸಮಾರಂಭದ ಮೇಲೆ ಉಗ್ರರು ಗುಂಡಿನ ಸುರಿಮಳೆಗರೆದು ಪರಾರಿಯಾದರು. ಪೂಂಛ್ ಜಿಲ್ಲೆಯ ಎಲ್​ಒಸಿ ಬಳಿ ಪಾಕ್ ಸೇನೆ ನಡೆಸಿದ ಷೆಲ್ ದಾಳಿಯಲ್ಲಿ ಸೇನೆಯ ಜೆಸಿಒ ಹುತಾತ್ಮರಾಗಿದ್ದು, ಓರ್ವ ನಾಗರಿಕನಿಗೆ ಗಾಯವಾಗಿದೆ.