ಯಿಪ್ಪೀ ಚೆಕ್ಮೇಟ್ ಚಾಲೆಂಜ್: 25 ಮಕ್ಕಳೊಂದಿಗೆ ವಿಶ್ವ ನಂ. 1 ಕಾರ್ಲ್ಸೆನ್ ಚದುರಂಗದಾಟ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವಿಶ್ವ ನಂ. 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಬೆಂಗಳೂರಿನಲ್ಲಿ ಶನಿವಾರ ನಡೆದ ಯಿಪ್ಪೀ ಚೆಕ್ಮೇಟ್ ಚಾಲೆಂಜ್ನಲ್ಲಿ (yippee! checkmate challenge) 25 ಉದಯೋನ್ಮುಖ ಚೆಸ್ ಆಟಗಾರರೊಂದಿಗೆ ಏಕಕಾಲದಲ್ಲಿ ಆಡಿದರು. ಬೆಂಗಳೂರು ಮತ್ತು ಚೆನ್ನೈನ ಈ ಮಕ್ಕಳು, ಐದು ಬಾರಿಯ ವಿಶ್ವ ಚಾಂಪಿಯನ್ ಆಟಗಾರನ ಎದುರು ತಮ್ಮ ಚೆಸ್ ಪ್ರತಿಭೆಯನ್ನು ಪ್ರದರ್ಶಿಸಿ ಗಮನಸೆಳೆದರು.
ಗ್ಲೋಬಲ್ ಚೆಸ್ ಲೀಗ್ನಲ್ಲಿ ಆಡುವ ಅಲ್ಪೈನ್ ಎಪಿಎಲ್ ಪೈಪರ್ಸ್ ತಂಡದ ಸಹಯೋಗದೊಂದಿಗೆ ಯಿಪ್ಪಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತದ ಗ್ರಾಂಡ್ಮಾಸ್ಟರ್ಗಳಾದ ಕೊನೆರು ಹಂಪಿ ಮತ್ತು ವಿದಿತ್ ಗುಜರಾತಿ ಕೂಡ ಭಾಗವಹಿಸಿದರು. ಮೂವರು ಚೆಸ್ ತಾರೆಯರೊಂದಿಗೆ ಮಕ್ಕಳು ಏಕಕಾಲದಲ್ಲಿ ಚೆಸ್ ಪಂದ್ಯಗಳನ್ನು ಆಡಿ ಸಂಭ್ರಮಿಸಿದರು ಮತ್ತು ವಿಶೇಷ ಅನುಭವವನ್ನು ಪಡೆದುಕೊಂಡರು.
ವಿವಾನ್ ಸಚ್ದೇವ್ ಅವರನ್ನು ಯಿಪ್ಪೀ ಚೆಕ್ಮೇಟ್ ಚಾಲೆಂಜ್ನ ಅತ್ಯುತ್ತಮ ಆಟಗಾರರನ್ನಾಗಿ ಆರಿಸಲಾಯಿತು. ಮೂವರು ಆಟಗಾರರ ಎದುರಿನ ಪಂದ್ಯದಲ್ಲಿ ಅವರು ಬಲಿಷ್ಠ ಸ್ಥಿತಿಯಲ್ಲಿದ್ದುದು ಇದಕ್ಕೆ ಕಾರಣವಾಗಿತ್ತು.
ಕಾರ್ಯಕ್ರಮದಲ್ಲಿ ನಾಲ್ವರು ಆಯ್ದ ಮಕ್ಕಳಿಗೆ ಅವರ ಹೆತ್ತವರೊಂದಿಗೆ ಯಿಪ್ಪೀ ಮಾಡುವ ಸವಾಲನ್ನೂ ನೀಡಲಾಗಿತ್ತು. ಆರ್ಯ ಮಿಶ್ರಾ ಎಂಬ ಬಾಲಕನನ್ನು ಗ್ಲೋಬಲ್ ಚೆಸ್ ಲೀಗ್ನಲ್ಲಿ ಅಲ್ಪೈನ್ ಪೈಪರ್ಸ್ ತಂಡದ ಮೊದಲ ನಡೆಯನ್ನು ಇಡಲು ಆಯ್ಕೆ ಮಾಡಲಾಯಿತು. ಅಲ್ಪೈನ್ ಪೈಪರ್ಸ ತಂಡದ ಕೋಚ್ ಹಾಗೂ ಗ್ರಾಂಡ್ ಮಾಸ್ಟರ್ ಪ್ರವಿಣ್ ತಿಪ್ಸೆ ಮತ್ತು ಸ್ನ್ಯಾಕ್ಸ್ ಆಂಡ್ ನೂಡಲ್ಸ್ ಫುಡ್ ಡಿವಿಜನ್ ಐಟಿಸಿ ಲಿಮಿಟೆಡ್ನ ಮಾರ್ಕೆಟಿಂಗ್ ಮುಖ್ಯಸ್ಥ ಅತುಲ್ ಪೂಜಾರ್ ಕೂಡ ಹಾಜರಿದ್ದರು.
2013ರ ಬಳಿಕ ಮೊದಲ ಸಲ ಕಾರ್ಲ್ಸೆನ್ಗೆ ಹಲವು ಸವಾಲು!
ನಾರ್ವೆಯ ಚೆಸ್ ತಾರೆ ಮ್ಯಾಗ್ನಸ್ ಕಾಲ್ಸೆನ್ 2013ರ ಬಳಿಕ ಮೊದಲ ಬಾರಿ ತಾನು ಇಷ್ಟೊಂದು ಪಂದ್ಯಗಳನ್ನು ಏಕಕಾಲದಲ್ಲಿ ಆಡುತ್ತಿರುವುದಾಗಿ ಹೇಳಿದರು. ಆಗ ವಿಶ್ವ ಚಾಂಪಿಯನ್ಷಿಪ್ಗೆ ಮುನ್ನ ಚೆನ್ನೈನಲ್ಲಿ ಸ್ಥಳಿಯ ಮಕ್ಕಳೊಂದಿಗೆ ಏಕಕಾಲದಲ್ಲಿ ಹಲವು ಪಂದ್ಯ ಆಡುವ ಸವಾಲು ನೀಡಲಾಗಿತ್ತು. ಆದರೆ ಆಗ ನನಗೆ ವಿಮಾನ ಪ್ರಯಾಣದ ಬಳಲಿಕೆ ಇತ್ತು. ಹೀಗಾಗಿ ಕೆಲ ಪಂದ್ಯಗಳನ್ನು ಸೋತಿದ್ದೆ. ಆರ್. ಪ್ರಜ್ನಾನಂದ ಮತ್ತು ಆರ್ ವೈಶಾಲಿ ಕೂಡ ಆಗ ಎದುರಾಳಿ ಆಟಗಾರರಾಗಿದ್ದರು. ಆದರೆ ಈ ಬಾರಿ ಹಾಗೆ ಆಗದಿರಲಿ ಎಂದು ಅವರು 25 ಮಕ್ಕಳೊಂದಿಗೆ ಆಡುವ ಸವಾಲಿಗೆ ಮುನ್ನ ಹೇಳಿದರು. ಈ ಮಕ್ಕಳೊಂದಿಗೆ ಆಡಿ ನನಗೆ ಬಾಲ್ಯದ ದಿನಗಳ ನೆನಪಾಯಿತು ಎಂದು ವಿದಿತ್ ಗುಜರಾತಿ ಹೇಳಿದರು. ಭಾರತದ ಮೊದಲ ಮಹಿಳಾ ಗ್ರಾಂಡ್ಮಾಸ್ಟರ್ ಕೊನೆರು ಹಂಪಿ, ಈ ವಿಶೇಷ ಅವಕಾಶ ಕಲ್ಪಿಸಿದ್ದಕ್ಕೆ ಯಿಪ್ಪೀಗೆ ಧನ್ಯವಾದಗಳು ಎಂದರು.