ನ್ಯೂಸ್

ದುಬೈನ ಬಿಲ್ಡಿಂಗ್​ ಒಂದರಿಂದ ಬಿದ್ದು ಸತ್ತ ಭಾರತೀಯ ಇಂಜಿನಿಯರ್​: ಸಾಯುವುದಕ್ಕೂ ಮುನ್ನ ಮೊಬೈಲ್​ ಬುಕ್​ ಮಾಡಿದ್ದೇಕೆ?

ದುಬೈ: ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತದ 25 ವರ್ಷದ ಯುವಕ ದುಬೈನ ಬಿಲ್ಡಿಂಗ್​ ಒಂದರಿಂದ ಬಿದ್ದು ಸತ್ತಿರುವ ಘಟನೆ ನಡೆದಿದೆ.

ಕೇರಳ ಮೂಲದ ಸಬೀಲ್​ ರೆಹಮಾನ್​ ಹೆಸರಿನ ಯುವಕ 2018ರಿಂದ ದುಬೈನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ. ಸೋಮವಾರದಂದು ಆತ ತಾನು ಕೆಲಸ ಮಾಡುತ್ತಿದ್ದ ಜಾಗದ ಬಳಿ ಇದ್ದ ಬಿಲ್ಡಿಂಗ್​ ಒಂದರಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಸೀರ್​ ವಟನಪಲ್ಲಿ ಎಂಬ ಸಾಮಾಜಿಕ ಕಾರ್ಯಕರ್ತ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಾಲ್ಕು ಜನ ಮಕ್ಕಳಿದ್ದ ಕುಟುಂಬದಲ್ಲಿ ಸಬೀಲ್​ ಕೊನೆಯ ಮಗನಾಗಿದ್ದು ದುಬೈನಲ್ಲಿ ತನ್ನ ಅಣ್ಣನ ಕುಟುಂಬದೊಂದಿಗೆ ಆತನ ಮನೆಯಲ್ಲೇ ವಾಸಿಸುತ್ತಿದ್ದ. ಸೋಮವಾರ ಮುಂಜಾನೆ ಎಂದಿನಂತೆ ಕೆಲಸಕ್ಕೆ ಹೊರಡುವಾಗ ತಿಂಡಿಯನ್ನು ಕಟ್ಟಿಕೊಂಡು ಹೊರಟಿದ್ದ. ತಾನು ಆನ್​ಲೈನ್​ನಲ್ಲಿ ಫೋನ್​ ಒಂದನ್ನು ಬುಕ್​ ಮಾಡಿರುವುದಾಗಿ ತಿಳಿಸಿದ್ದ ಆತ ಅದನ್ನು ತೆಗೆದುಕೊಳ್ಳುವಂತೆ ಮನೆಯವರಲ್ಲಿ ಹೇಳಿ ಹೋಗಿದ್ದ.

ಮಾಮೂಲಿಯಂತೆ ಹೊರಟ ಸಬೀಲ್​ ಆ ಬಿಲ್ಡಿಂಗ್​ಗೆ ಏಕೆ ಹೋದ ಅಲ್ಲಿಂದ ಏತಕ್ಕಾಗಿ ಬಿದ್ದ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ. ನಸೀರ್​ ವಟನಪಲ್ಲಿ ಮೃತ ವ್ಯಕ್ತಿಯ ಅವಶೇಷವನ್ನು ಆತನ ಹುಟ್ಟೂರಾದ ಮಲಪ್ಪುರಂ ಜಿಲ್ಲೆಯ ತಿರೂರಿಗೆ ಕಳುಹಿಸಲು ಆತನ ಕುಟುಂಬಕ್ಕೆ ನೆರವು ಮಾಡುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)