ನ್ಯೂಸ್

ಉಕ್ಕು, ಅಲ್ಯುಮಿನಿಯಂ ಮೇಲೆ ಶೇ. 25ರಷ್ಟು ತೆರಿಗೆ

ವಾಷಿಂಗ್ಟನ್: ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಶೇಕಡ 25ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಿಳಿಸಿದ್ದಾರೆ.

ಇವುಗಳ ಜತೆಗೆ ಇತರ ಕೆಲವು ವಸ್ತುಗಳ ಆಮದಿನ ಮೇಲೆಯೂ ತೆರಿಗೆ ವಿಧಿಸುವ ಇರಾದೆ ಇದ್ದು, ಈ ವಾರದಲ್ಲಿ ಅಧಿಕೃತ ಘೊಷಣೆ ಮಾಡಲಾಗುವುದು ಎಂದು ಅವರು ಸುದ್ದಿಗಾರರಿಗೆ ಹೇಳಿದರು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ನೀಡಲಿಲ್ಲ. ಈ ಕ್ರಮವು ಕೆನಡಾ ಮತ್ತು ಮೆಕ್ಸಿಕೋ ಮೇಲೆಯೂ ಅನ್ವಯವಾಗುತ್ತದೆ ಎಂದಷ್ಟೇ ಹೇಳಿದರು.

ವಿವಿಧ ದೇಶಗಳ ಜತೆಗಿನ ಪಾರಸ್ಪರಿಕ ಸುಂಕ (ರೆಸಿಪ್ರೋಕಲ್ ಟ್ಯಾರಿಫ್) ಕೂಡ ಮಂಗಳವಾರ ಅಥವಾ ಬುಧವಾರ ಪ್ರಕಟವಾಗಲಿದೆ. ಯಾವುದಾದರೊಂದು ರಾಷ್ಟ್ರ ನಮ್ಮ ವಸ್ತುಗಳಿಗೆ ಶೇ. 130ರಷ್ಟು ಸುಂಕ ವಿಧಿಸುತ್ತಿದ್ದು, ಆ ರಾಷ್ಟ್ರದ ವಸ್ತುವಿಗೆ ನಾವು ಯಾವುದೇ ಸುಂಕ ವಿಧಿಸುತ್ತಿಲ್ಲ ಎನ್ನುವುದಾದರೆ ಅದು ಹಾಗೆಯೇ ಮುಂದುವರಿಯಲು ಸಾಧ್ಯವಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ಇತರ ದೇಶಗಳು ಅಮೆರಿಕದ ವಸ್ತುಗಳ ಮೇಲೆ ತೆರಿಗೆ ಹಾಕುತ್ತಿದ್ದರೆ ಅದಕ್ಕೆ ಪ್ರತಿಯಾಗಿ ಆ ರಾಷ್ಟ್ರಗಳಿಂದ ಆಮದಾಗುವ ವಸ್ತುಗಳಿಗೆ ಹಾಕುವ ತೆರಿಗೆಗೆ ಪಾರಸ್ಪರಿಕ ಸುಂಕ ಎನ್ನಲಾಗುತ್ತದೆ. ಕೆಲವೇ ದಿನಗಳ ಹಿಂದೆ ಕೆನಡಾ, ಮೆಕ್ಸಿಕೋ ಮೇಲೆ ಟ್ರಂಪ್ ಶೇ. 25 ತೆರಿಗೆ ಘೊಷಣೆ ಮಾಡಿದರೂ ನಂತರ ಅದನ್ನು 30 ದಿನಗಳ ಕಾಲ ಮುಂದೂಡಿದರು. ಅದೇ ವೇಳೆ, ಚೀನಾ ವಸ್ತುಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ಸುಂಕವನ್ನೂ ಟ್ರಂಪ್ ವಿಧಿಸಿದ್ದರು.

ತುರ್ತು ಸಭೆ: ಟ್ರಂಪ್ ಹೇಳಿಕೆ ಹೊರಬೀಳುತ್ತಿದ್ದಂತೆಯೇ ದ.ಕೊರಿಯಾದ ಹಂಗಾಮಿ ಅಧ್ಯಕ್ಷ ಚೋಯ್ ಸ್ಯಾಂಕ್ ಮಾಕ್, ವಿದೇಶಾಂಗ ಮತ್ತು ವ್ಯಾಪಾರ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದು ಅದರಿಂದ ತಮ್ಮ ದೇಶದ ಕೈಗಾರಿಕೆಗಳ ಮೇಲೆ ಆಗುವ ಪರಿಣಾಮದ ಕುರಿತು ಚರ್ಚೆ ನಡೆಸಿದರು. ದ.ಕೊರಿಯಾದ ಉಕ್ಕು ಕಂಪನಿಗಳ ಷೇರುಗಳ ಬೆಲೆ ಸೋಮವಾರ ಕುಸಿಯಿತು. ದ.ಕೊರಿಯಾ ಕಳೆದ ವರ್ಷ ಜನವರಿಯಿಂದ ನವೆಂಬರ್​ವರೆಗೆ 4.8 ಶತಕೋಟಿ ಡಾಲರ್ ಮೌಲ್ಯದ ಉಕ್ಕು ಉತ್ಪನ್ನಗಳನ್ನು ರಫ್ತು ಮಾಡಿದೆ.

ಭಾರತದ ಮೇಲೇನು ಪರಿಣಾಮ?

ಅಮೆರಿಕವು ಉಕ್ಕು ಮತ್ತು ಅಲ್ಯುಮಿನಿಯಂ ಅಮದಿನ ಮೇಲೆ ಶೇ. 25 ಸುಂಕ ವಿಧಿಸಿದರೆ ಭಾರತದ 1 ಶತಕೋಟಿ ಡಾಲರ್ (ಸುಮಾರು 8700 ಕೋಟಿ ರೂ.) ಮೌಲ್ಯದ ರಫ್ತಿನ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಒಟ್ಟಾರೆ ಉಕ್ಕು ರಫ್ತಿನ ಅಲ್ಪ ಪ್ರಮಾಣ, ಅಂದರೆ ಸುಮಾರು ಶೇ. 5ರಷ್ಟು ಮಾತ್ರ ಅಮೆರಿಕಕ್ಕೆ ಹೋಗುತ್ತದೆ. ಆದರೆ ಅಲ್ಯುಮಿನಿಯಂ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಆಗುತ್ತದೆ. ಭಾರತದ ಒಟ್ಟು ಅಲ್ಯುಮಿನಿಯಂ ರಫ್ತಿನಲ್ಲಿ ಅಮೆರಿಕದ ಪಾಲು ಶೇ. 12ರಷ್ಟಿದೆ. 2024ರ ನವೆಂಬರ್​ವರೆಗೆ ಅಮೆರಿಕಕ್ಕೆ ಭಾರತದ ಅಲ್ಯುಮಿನಿಯಂ ರಫ್ತು 777 ದಶಲಕ್ಷ ಡಾಲರ್​ನಷ್ಟಿತ್ತು. ಇದು ದೇಶದ ಒಟ್ಟಾರೆ ಅಲ್ಯುಮಿನಿಯಂ ರಫ್ತಿನ (6.7 ಟ್ರಿಲಿಯನ್ ಡಾಲರ್) ಶೇ. 11.5ರಷ್ಟಾಗಿದೆ.

ಲೋಹ ಷೇರುಗಳ ಬೆಲೆ ಕುಸಿತ

ಟ್ರಂಪ್ ಹೇಳಿಕೆ ಹಿನ್ನೆಲೆಯಲ್ಲಿ ಸೋಮವಾರ ಲೋಹ ಕಂಪನಿಗಳ ಷೇರುಗಳ ಬೆಲೆ ಇಳಿಕೆಯಾಯಿತು. ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಶೇ. 4.83, ಎಸ್​ಎಐಎಲ್ ಶೇ. 4.67, ವೇದಾಂತ ಶೇ. 4.31, ಎನ್​ಎಂಡಿಸಿ ಶೇ. 3.95, ಟಾಟಾ ಸ್ಟೀಲ್ ಶೇ. 3.11, ಜೆಎಸ್​ಡಬ್ಲ್ಯೂ ಸ್ಟೀಲ್ ಶೇ. 2.2, ಹಿಂಡಾಲ್ಕೊ ಶೇ. 1.87, ಜಿಂದಾಲ್ ಸ್ಟೇನ್​ಲೆಸ್ ಶೇ. 1.61 ಕುಸಿತ ಕಂಡವು. ಮುಂಬೈ ಷೇರುಪೇಟೆಯ ಲೋಹ ಸೂಚ್ಯಂಕ ಶೇ. 2.63ರಷ್ಟು ಕುಸಿಯಿತು.

ಮೂಡಿ ವರದಿ ಏನು ಹೇಳುತ್ತದೆ?

ಕಳೆದ ವರ್ಷದಲ್ಲಿ ಭಾರತಕ್ಕೆ ಉಕ್ಕು ಆಮದು ಹೆಚ್ಚಾಗಿ, ಭಾರತೀಯ ಉಕ್ಕು ಉತ್ಪನ್ನಗಳ ಬೆಲೆ ಕುಸಿದಿದ್ದು, ಉತ್ಪಾದಕರ ಆದಾಯ ಖೋತಾ ಆಗಿದೆ. ಟ್ರಂಪ್ ಕ್ರಮದಿಂದಾಗಿ ಅವರು ಎದುರಿಸುತ್ತಿರುವ ಸವಾಲುಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಮೂಡೀಸ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ.

ಹಿಂದೆಯೂ ಆಗಿತ್ತು...

2018ರಲ್ಲಿ ಕೂಡ ಟ್ರಂಪ್ ಅಧ್ಯಕ್ಷರಾಗಿದ್ದಾಗ ಇಂಥದೇ ನಿರ್ಧಾರ ಕೈಗೊಂಡಿದ್ದರು. ಅದರಿಂದ ಭಾರತದ ಅಲ್ಯುಮಿನಿಯಂ ರಫ್ತಿನ ಮೇಲೆ ಹೆಚ್ಚಿನ ಪರಿಣಾಮವೇನೂ ಆಗಿರಲಿಲ್ಲ. ಟ್ರಂಪ್ ಅವರ ಆಗಿನ ತೀರ್ವನಕ್ಕೆ ಪ್ರತಿಯಾಗಿ ಭಾರತ 2019ರ ಜೂನ್​ನಲ್ಲಿ ಅಮೆರಿಕದ 28 ವಸ್ತುಗಳ ಆಮದಿನ ಮೇಲೆ ಹೆಚ್ಚುವರಿ ಸುಂಕ ವಿಧಿಸಿ ಸೇಡು ತೀರಿಸಿಕೊಂಡಿತ್ತು. 2023ರ ಜು. 3ರಂದು ಅಮೆರಿಕ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ವಿಧಿಸಿದ್ದ ತೆರಿಗೆಯನ್ನು ಹಿಂತೆಗೆದುಕೊಂಡಿತ್ತು.

ಯಾವ್ಯಾವ ರಾಷ್ಟ್ರಗಳ ಮೇಲೆ ಎಫೆಕ್ಟ್?

ಜಪಾನ್, ಯೂರೋಪ್, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಮೇಲೆ ಟ್ರಂಪ್ ಕ್ರಮ ಹೆಚ್ಚು ಪರಿಣಾಮ ಉಂಟು ಮಾಡಲಿದೆ.