ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಾಗಿರುವ ಜಿಲ್ಲೆಗಳಲ್ಲಿ ಬೆಳೆ ಹಾನಿ ಜಂಟಿ ಸಮೀಕ್ಷೆ ಒಂದು ವಾರದೊಳಗೆ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕ ಮಳೆ ಹಾನಿ ಬಾಧಿತ ಜಿಲ್ಲೆಗಳ ಡಿಸಿಗಳು, ಜಿಲ್ಲಾಮಟ್ಟದ ಅಧಿಕಾರಿಗಳ ಜತೆಗೆ ಶನಿವಾರ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿಗೆ ಒಟ್ಟು 25 ಜನರು ಬಲಿಯಾಗಿದ್ದು, ನಿಯಮಾವಳಿ ಪ್ರಕಾರ ಪರಿಹಾರದ ಮೊತ್ತ ವಿತರಿಸಲಾಗಿದೆ ಎಂದರು.
ಪೂರ್ಣ ಹಾಗೂ ಭಾಗಶಃ ಬಿದ್ದ ಮನೆಗಳಿಗೆ 48 ತಾಸಿನೊಳಗೆ ಪರಿಹಾರ ವಿತರಿಸಲು ಡಿಸಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನವೆಂಬರ್, ಡಿಸೆಂಬರ್‌ಗೂ ಕೂಡ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಪೂರ್ಣ ಬಿದ್ದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರದ ಜತೆಗೆ ಹೊಸದಾಗಿ ಮನೆ ಕಟ್ಟಿಸಿಕೊಡಲಾಗುವುದು. ಭಾಗಶಃ ಬಿದ್ದ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲು ಸೂಚಿಸಲಾಗಿದೆ ಎಂದರು.
ಮುಂಗಾರು ಹಂಗಾಮಿನಲ್ಲಿ ಈ ಪರಿಹಾರ ಮೊತ್ತ ನಿಗದಿಯಾಗಿದೆ. ಹಿಂಗಾರು ಹಂಗಾಮಿನ ಅತಿವೃಷ್ಟಿಗೆ ಮಾತ್ರವಲ್ಲ, ಮುಂದಿನ ನವೆಂಬರ್, ಡಿಸೆಂಬರ್‌ನಲ್ಲಿ ಸುರಿಯಬಹುದಾದ ಮಳೆಗೂ ವಿಸ್ತರಿಸಲಾಗಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪ್ರಕೃತಿ ವಿಕೋಪ ಪರಿಹಾರ ತುರ್ತಾಗಿ ಕೈಗೆತ್ತಿಕೊಳ್ಳಲು ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ರ ಖಾತೆಯಲ್ಲಿರುವ ಸೇರಿ 666.96 ಕೋಟಿ ರೂ. ಅನುದಾನ ಲಭ್ಯವಿದೆ.
ಯುದ್ಧೋಪಾದಿಯಲ್ಲಿ ಸಂತ್ರಸ್ತರು ಹಾಗೂ ತೊಂದರೆಗೆ ಸಿಲುಕಿದ ರೈತರಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವೆ. ಸದ್ಯದ ಅಂದಾಜಿನ ಪ್ರಕಾರ ಒಟ್ಟು 1.05 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ನಷ್ಟವಾಗಿರುವ ಮಾಹಿತಿಯಿದ್ದು, ಜಂಟಿ ಸಮೀಕ್ಷೆ ಬಳಿಕ ನಿಖರವಾಗಿ ಗೊತ್ತಾಗಲಿದೆ.
ಮುಂಗಾರು ಹಂಗಾಮಿನಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದ ಆಹಾರಧಾನ್ಯ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ನಿಯಮಾನುಸಾರ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಖಚಿತಪಡಿಸಿದರು.